Monday, April 8, 2013

ಹಸಿರೇ ಉಸಿರಾ?

ಬಿಸಿಲಲಿ ನಡೆ ನಡೆದು ದೇಹ ದಣಿದು
ನೆರಳ ಬಯಸಿತು
ಹಸಿರ ನೆರಳ ಬಯಸಿತು
ಬೃಹತ್ ಕಟ್ಟಡದಾ ನೆರಳು ಆಸರೆಯಾಯಿತು
ಹಸಿರು ಮರದ ತಂಪು ನೆರಳು ನಿಲುಕದಾಯಿತು

ಕಟ್ಟಡದಡಿ ಕುಳಿತು ಬೆವರನೊರೆಸಿ
ಗಾಳಿ ಬಯಸಿತು
ಹಸಿರ ಗಾಳಿ ಬಯಸಿತು
ಕಾರ್ - ಖಾನೆಯ ಗಾಳಿ ಉಸಿರಾಯಿತು
ಹಸಿರು ಮರದ ತಂಪು ಗಾಳಿ ಕನಸಾಯಿತು

ಬೆವರೊರೆಸಿದ ಕರವಸ್ತ್ರ ಮಸಿಯಾಯಿತು 



Tuesday, January 3, 2012

ಸ್ವರ್ಣ ಮಯೂರ

ಎರಡು ವರ್ಷಗಳ ನಂತರ ಮತ್ತೆ ಬ್ಲಾಗ್ ಬರೆಯಲು ಉತ್ಸುಕಳಾಗಿದ್ದೇನೆ..ಇದಕ್ಕೆ ಸ್ಪೂರ್ಥಿ ನಮ್ಮ ಪುಟ್ಟ ಕಂದ..ಮಯೂರ..ಹತ್ತು ತಿಂಗಳ ಕಂದ..ನಮ್ಮ ಕಣ್ಮಣಿ..ಅವನ ಆಟ, ನೋಟ ಮೈಮನ ಸೆಳೆಯುತ್ತವೆ..ಅವನಿಗಾಗಿ ಕೆಲ ತಿಂಗಳುಗಳ ಮುಂಚೆ ರಚಿಸಿದ ಈ ಲಾಲಿ ಹಾಡನ್ನು ನಾ ಮರೆಯುವುದಕ್ಕೆ ಮೊದಲು ಇಲ್ಲಿ ಪ್ರಕಟಿಸುತ್ತಿದೇನೆ..


ಕಮಲ ವದನ, ಪದ್ಮ ಪಾದ
ಪದ್ಮ ಹಸ್ತ, ಬೆಣ್ಣೆಗೆನ್ನೆ, ತಿಳಿಗೆಂಪು ಕೆನ್ನೆ
ಚೆಂದದಾ ನಾಸಿಕವ ಹೊಂದಿದಾ ಮುದ್ದು ಕಂದನೇ
ಮಯೂರ, ಸ್ವರ್ಣ ಮಯೂರ

ದಿನವು ನಿನ್ನನು ಮುದ್ದಿಸೀ, ಮುದ್ದಿಸಿ
ಆ ಕಂಗಳಲಿರುವಾ ಮುಗ್ಧತೆಗೆ ಸೋತುಹೋಗಿ
ಆ ಕಡುಗಪ್ಪುಗಂಗಳರಿರುವ ಮುಗ್ಧತೆಗೆ ಸೋತುಹೋಗಿ
ತುಟಿಯ೦ಚಿನಲರಳುವಾ ನಗೆಗೆ, ಆ ಪುಟ್ಟ ನಗೆಗೆ
ಮಾರುಹೋಗಿ..
ದಿನವು ನಿನ್ನನು ಮುದ್ದಿಸೀ ಮುದ್ದಿಸೀ ತೃಪ್ತಿ ಪಡುವಾ
ಅಮ್ಮ ನಾನು, ಕಂದ ನೀನು,
ಮಯೂರ, ಸ್ವರ್ಣ ಮಯೂರ

ಸವಿಗನಸನೆ ಕಾಣುತಾ
ಮಲಗು ನೀ ಮುದ್ದು ಕಂದನೇ
ದೇವರೊಡನೆ ಸಂಭಾಷಿಸುತಾ ಮಲಗು ನೀ
ಪುಟ್ಟ ಕಂದನೇ..
ತಾಸ ಬಳಿಕ ಎದ್ದು ಉಟ ಮಾಡುವಿಯಂತೆ
ಆ ವರೆಗೂ..ಮಲಗು ನೀ..
ಪುಟ್ಟ ಕಂದನೇ
ಮಯೂರ, ಸ್ವರ್ಣ ಮಯೂರ..


ಲಾಲಿ ಹಾಡು ಎಂದು ಮುಂಚೆ ಹೇಳಿದ್ದೇನೆ..ಬರೀ ಕವಿತೆಯನ್ನು ಪೋಸ್ಟ್ ಮಾಡಿದರೆ ಅದು ಹಾಡಾಗುತ್ತದೆಯೇ?
ಇಲ್ಲಿದೆ ಹಾಡು:
mayUra.wmv

Sunday, October 11, 2009

ನೆನಪುಗಳ ಸರಪಳಿ

ನೆನಪಿನ ಪುಟಗಳ ತೆರೆದಿಡು ನೀ
ಕಪ್ಪು-ಬಿಳುಪು ಚಿತ್ರಗಳನು
ಬಣ್ಣವ ತುಂಬಿ ಬಣ್ಣಿಸು ನೀ
ಹತ್ತಿದುದು ನಡುವೆಯಲಾದರೂ
ಬಂಡಿಯು ಸಾಗಿದ ಹಾದಿಯ
ತಿಳಿಯ ಬಯಸಿಹೆ ಎನ್ನಿನಿಯ

ಹಳೆ ನೆನಪುಗಳ ಸಿಹಿ-ಕಹಿಗಳನು
ಸವಿಯುತ-ಸಹಿಸುತ ಕೈಹಿಡಿದು
ಆ ಸೂತ್ರಧಾರನ ಮೇರೆಗೆ
ಹೊಸ ನೆನಪುಗಳ ಚಿತ್ರಣದಿ
ನಟಿಸುವ ಈರ್ವರು ಸಂಭ್ರಮದಿ

ಬಂಡಿಯ ಮುಂದಿನ ಮಾರ್ಗವ
ಜೊತೆಯಲಿ ಸೇರಿ ಹುಡುಕೋಣ
ಬಾಳಿನ ಗುರಿಯನು ತಲುಪೋಣ
ಹೊಸ ನೆನಪುಗಳಿಗೆ ತಳಹದಿಯ
ನಾವಿನ್ನು ಜೊತೆಗೂಡಿ ಕಟ್ಟೋಣ

Thursday, October 1, 2009

ಅರುಣೋದಯ

ಕಣ್ಣೋಟವನೆದುರಿಸಲಾಗದೆ ಕಾಲ್ಬೆರಳುಗಳ ನೋಡಿದೆ
ದನಿಯ ಕೇಳಿ ವಿಸ್ಮಿತಳಾದೆ
ಒಮ್ಮೆ ನೋಡಬೇಕೆಂಬಾಸೆಯ ನೀಗಿಸಲಾಗದೆ
ಮಿಂಚಿನಂತಹ ನೋಟದಿ
ನಾಚಿ ನೀರಾದೆ, ತಲೆ ಬಾಗಿಸಿದೆ

ಮೂಕಳಾದೆ, ಅಧೀರಳಾದೆ
ಇವರು ನನ್ನವರಾಗಬಹುದೆ?
ಬಾನ ಚಂದ್ರಕೆ ಹಾತೊರೆಯುವುದೇ?
ಏಕಾಂತವ ಬಯಸಿ
ಹೆಜ್ಜೆಗೆ ಹೆಜ್ಜೆ ಬೆರೆಸಿ
ಮಹಡಿಗೆ ಮೆಟ್ಟಿಲುಗಳನ್ನೇರಿದೆ
ಅವು ಜೀವನದ ಮೆಟ್ಟಿಲುಗಳಾಗಬಾರದೆ?

ಇವರೆದುರು ನಿಂತಾಗ ತಬ್ಬಿಬ್ಬಾದೆ
ಎವೆಯಿಕ್ಕದೆ ನೋಡಲಾಗದೆ
ಕೈಬಳೆಗಳ ತಿರುವಿದೆ
ಮಾತನಾಡಲಾಗದೆ ಮನಸೋತೆ, ಮೈಮರೆತೆ
ನೀ ನನ್ನವನಾಗಬಾರದೆ?
ಎಂದು ನಾ ಕೇಳಲಾಗದಾದರೂ
ಭಾವನೆಗಳ ನಾ ಮರೆಮಾಚಲಾದೆ

ಮೊದಲ ನೋಟದಿ ಪ್ರೀತಿಯ ಸ್ಪರ್ಷವಾಯಿತೆ
ಅಂದಿನ ಕಡೆಯ ನೋಟದಿ ಭರವಸೆಯಿತ್ತೆ?
ನಾ ಹೇಳಲಾದೆ
ಏಳು ದಿನಗಳು ಕಾದೆ
ಅದು ನರಕಯಾತನೆಯೆ?
ಕಲ್ಪನೆಗಳು ನಿಲ್ಲದಾಯಿತೆ
ಕೃಷಳಾದೆ,ಹತಾಶಳಾದೆ
ಕಂಬನಿಗಳಿಂದ ತಲೆದಿಂಬ ತೋಯ್ದೆ
ಅಸಹಾಯಳಾದೆ, ದೇವರ ಬೇಡಿದೆ
ನನ್ನ ನಾ ಹಳಿದೆ

ಕಡೆಗೆ ಕರೆ ಬಂದಿತು
ವರನಿಗೆ ಒಪ್ಪಿಗೆಯೆಂದಾಯಿತು
ನಾ ಹರ್ಷದಿ ಕಂಬನಿಯಿತ್ತೆ
ಮತ್ತೆ ಇವರ ನೋಡಲು ಹಾತೊರೆದೆ
ವಿಧಿಯಾಟವ ಹೊಗಳಿದೆ
ನನ್ನ ಬಾಳಲಿ ಅರುಣೋದಯವಾಗಿದೆ

ನೆನಪಿನ ಸುರುಳಿಯಲಿ ಧ್ವನಿಯಿಲ್ಲವಾಗಿದೆ
ಕನಸಿನಂತೆ ಕಣ್ಮುಂದೆ ತೇಲಿದೆ
ಆ ಏಳು ದಿನಗಳ ಕಾದಾಟ
ಈಗ ಸವಿನೆನಪಾಗಿದೆ
ಇವರು ಕಚೇರಿಯಿಂದ ತೆರಳಲು
ನಾ ಕಾಯುತಿರುವೆ
ಆ ಮೊದಲ ನೋಟದ ಮಾಯೆ
ಇಂದಿಗೂ ಮರೆಯಾಗದೆ ಉಳಿದಿದೆ


* ಇದು ಪದ್ಯವೋ ಗದ್ಯವೋ ನನಗೆ ಗೊತ್ತಿಲ್ಲ..ಭಾವನೆಗಳನ್ನು ಬರೆಯಲು ಮನಸಾಯ್ತು..ಮನ:ಪಟಲದಿಂದ ಅಳಿಸದಿರಲಿ ಎಂದು..

Friday, July 31, 2009

ಟ್ರಿಬೆರ್ಗ್ ಪ್ರವಾಸ













ಮೊನ್ನೆ ನಾನೂ ಇವರೂ ಬೆಳಗ್ಗೆ ಬೇಗನೆ ಸಿದ್ಧರಾಗಿ ಹೊರಟೆವು..
7 40 ಕ್ಕೆ ಟ್ರಾಮ್ ಹಿಡಿದು ಫ್ರೈಬುರ್ಗ್ ರೈಲು ನಿಲ್ದಾಣಕ್ಕೆ ಹೋದೆವು..ಅಂದು ಸೋಮವಾರ ಪಬ್ಲಿಕ್ ಹಾಲಿಡೇ ಯಾಗಿದ್ದರಿಂದ ನಮ್ಮಂತಯೇ ಇನ್ನೆಷ್ಟು ಜನ ಹೀಗೆ ಪ್ರವಾಸವನ್ನು ಕೈಗೊಂಡಿದ್ದರೋ..ಒಟ್ಟಿನಲ್ಲಿ ಒಫ್ಫೆನ್ಬುರ್ಗ್ ಟ್ರೇನಿನಲ್ಲಿ ಹೆಚ್ಚು ಜನರಿದ್ದರು..ನಾನು ಪೂರ್ಣ ಚಂದ್ರ ತೇಜಸ್ವಿಯವರ ಒಂದು ಪುಸ್ತಕವನ್ನು ಹಿಡಿದು ಕುಳಿತೆ..ಕಾದಂಬರಿ ಮುಗಿಯುವ ಹಂತದಲ್ಲಿದ್ದರಿಂದಲೋ ಎನೋ ನನಗೆ ಸಮಯ ಹೋದದ್ದೇ ಗೊತ್ತಾಗಲಿಲ್ಲ..ಇವರೂ ಕೂಡ ನನ್ನ ಕಾಟ ಇಲ್ಲದೆ ಒಂದು ಸ್ವಲ್ಪ ಹೊತ್ತು ನೆಮ್ಮದಿಯಿಂದ ನಿದ್ದೆ ಹೋದರು..ಇವರಿಗೆ ಅಂಥ ಅವಕಾಶ ಸಿಕ್ಕುವುದು ಅಪರೂಪವೇ ಪಾಪ..:)
ಒಫ್ಫೆನ್ಬುರ್ಗ್ ತಲುಪಿದ ಮೇಲೆ ನಾವಿಬ್ಬರೂ ಕೈ ಕೈ ಹಿಡಿದು ಪ್ಲಾಟ್ಫಾರ್ಮ್ ಬದಲಾಯಿಸಿ ಟ್ರಿಬೆರ್ಗ್ ಟ್ರೇನನ್ನು ಹಿಡಿದೆವು..ಇಲ್ಲಿ ಒಂದು ರಾಜ್ಯಕ್ಕೆ ಸೀಮಿತವಾದ ಟಿಕೆಟ್ ಅನ್ನು ಕೊಂಡರೆ ಟ್ರೇನ್ ಬಸ್ಸುಗಳಲ್ಲಿ ಎಲ್ಲಿಗೆ ಬೇಕಾದರೂ ಹೋಗಬಹುದು..ನಾವು ತಲುಪಿದ ಮೇಲೆ ಟ್ರಿಬೆರ್ಗ್ ಸ್ಟೇಷನ್ನಿನಲ್ಲಿ ಕೆಲವು ಭಾರತೀಯರನ್ನು ಕಂಡೆವು..ಏನೋ ಬಹಳ ಪರಿಚಯದವರಂತೆ ನೋಡಿ ನಕ್ಕೆವು..ನಮ್ಮ ದೇಶದಲ್ಲಿದ್ದಾಗ ಒಮ್ಮೆಯಾದರೂ ಅಪರಿಚಿತರಿಗೆ ನಗೆ ಬೀರಿದ್ದು ನೆನಪಿಲ್ಲ..ಇಲ್ಲಿ ಬಂದ ಮೇಲೆ ಯಾರಾದರೂ ನಮ್ಮವರು ಸಿಕ್ಕರೆ ಮೈಸೂರಿನಲ್ಲಿ ಪಕ್ಕದ ಮನೆಯವರೊಡನೆ ಇದ್ದ ಸೌಹಾರ್ದಕ್ಕಿಂತ ಹೆಚ್ಚು ಆತ್ಮೀಯತೆಯಿಂದ ಹಲ್ಲುಗಿಂಜುತ್ತೇವೆ..ಹಿತ್ತಲ ಗಿಡ ಎಲ್ಲಿ ಮದ್ದು..ನಾನು ಮತ್ತೇನೋ ಮಾತನಾಡಲು ಆರಂಭಿಸಿ ಬರೆಯಬೇಕಾದ್ದ ವಿಷಯದಿಂದ ದೂರ ಸರಿಯುತಿದ್ದೇನೆ..ಟ್ರಿಬೆರ್ಗ್ ಬಸ್ಸು ನಿಲ್ದಾಣದಿಂದ ಬಸ್ಸು ಹಿಡಿದು ಬೆಟ್ಟದ ಮೇಲೆ ಹೋದೆವು..ಇವರು ಒಳ್ಳೆಯ ಛಾಯಾಚಿತ್ರಕಾರರು..ಕ್ಯಾಮೆರ,ಟ್ರೈಪಾಡ್ ಕೈಯಲ್ಲಿದ್ದರೆ ನನ್ನ ಇರುವನ್ನೂ ಮರೆತುಬಿಡುತ್ತಾರೆ (ನಾ ಕ್ಯಾಮೆರ ಮುಂದೆ ಇಲ್ಲದ ಹೊರತು..:))ಪ್ರಕೃತಿಯ ಸೌಂದರ್ಯವನ್ನು ಆ ಯಂತ್ರದಲ್ಲಿ ಹಿಡಿದಿಟ್ಟುಕೊಳ್ಳುವುದೆಂದರೆ ಇವರಿಗೆ ಅಚ್ಚುಮೆಚ್ಚು..ನಾನು ಸುಂದರ ಚಿತ್ರಗಳನ್ನು ಕಣ್ಣಿನಲ್ಲಿ ತುಂಬಿಕೊಳ್ಳಲು ಪ್ರಯತ್ನಿಸುತ್ತೇನೆ..ಅದಕ್ಕೆ ಇರಬೇಕು ಮೂರೂ ಹೊತ್ತು ಇವರತ್ತ ನೋಡಿ ನೋಡಿ ಬೇಸರ ಹುಟ್ಟಿಸುತ್ತೇನೆ! :)


ಅದೊಂದು ಚಿಕ್ಕ ಜಲಪಾತ..ಸುಂದರವಾದ ಜಾಗ..ಹಲವಾರು ಪ್ರವಾಸಿಗರು ಬಂದಿದ್ದರು..ಮಧ್ಯ ವಯಸ್ಕರು ಚಿಕ್ಕ ಮಕ್ಕಳನ್ನು ಪ್ರಾಮ್ನಲ್ಲಿ ತಳ್ಳುತ್ತಾ, ಮತ್ತು ಕೆಲವರು ಅವರ ಮಕ್ಕಳ ಕೈ ಹಿಡಿದು, ಪ್ರೇಮಿಗಳು ಒಬ್ಬರನ್ನೊಬ್ಬರು ಬಳಸಿ, ಇನ್ನು ಕೆಲವರು ನಾಯಿಯ ಚೇನ್ ಕೈಯಲ್ಲಿ ಹಿಡಿದು, ಮತ್ಯಾರೋ ಕೋಲು ಹಿಡಿದು, ಇವೇನು ಇಲ್ಲದೆ ಒಂಟಿಯಾಗಿ ಬಂದವರು ಕ್ಯಾಮೆರಾ ಹಿಡಿದು ಜಲಪಾತದ ಪಕ್ಕ ಮೇಲೇರಲು ಮಾಡಿದ್ದ ಹಾದಿಯಲ್ಲಿ ಹೋಗುತ್ತಿದ್ದರು..ಬಹುಮಂದಿ ಕಡಲೆಕಾಯಿ ಕವರುಗಳನ್ನು ಇಟ್ಟುಕೊಂಡಿದ್ದರು..ಈ ಜಾಗದಲ್ಲಿ ಅಳಿಲುಗಳಿವೆಯಾದ್ದರಿಂದ ಅವುಗಳನ್ನು ಸೆಳೆಯೆಲು ಕಡಲೆಕಾಯಿ ಹಾಕುತ್ತಿದ್ದರು..ಒಂದು ಆಶ್ಚರ್ಯದ ಸಂಗತಿಯೆಂದರೆ ಸುಮಾರು ಐನೂರು ಅಡಿ ಎತ್ತರವಿರುವ ಈ ಜಲಪಾತದಿಂದ ನಮ್ಮ ಗಗನಚುಕ್ಕಿ ಭರಚುಕ್ಕಿ ಎರಡರಿಂದ ಒಟ್ಟು ಉತ್ಪಾದನೆಯಾಗುವ ವಿದ್ಯುತ್ತಿಗಿಂದ ಹೆಚ್ಚಾಗುತ್ತದೆ ಎಂದು ಇವರು ಹೇಳಿದರು..ಇಲ್ಲಿಯ ಟರ್ಬೈನ್ಗಳು ಉನ್ನತಮಟ್ಟದ್ದೆಂದು ಹೇಳಿದರು..ನಮ್ಮಲ್ಲಿಯೂ ಹೀಗೇ ಮಾಡಲಾಗುವುದಿಲ್ಲವೆ ಎಂದು ನಾನು ಯೊಚಿಸುತ್ತಿದ್ದಾಗ ಇವರು ನಮ್ಮ ಸರ್ಕಾರ ಹೀಗೆ ಗುಣಮಟ್ಟ ವರ್ಧನೆಗೆ ಎಷ್ಟು ಬಾರಿ ಹಣ ಗ್ರ್ಯಾಂಟ್ ಮಾಡಿರುತ್ತಾರೋ..ಅದು ತಲುಪಬೇಕಾದ ಸ್ಥಳಕ್ಕೆ ತಲುಪಿದರೆ ತಾನೆ..ಮಧ್ಯದಲ್ಲೆ ಎಲ್ಲರೂ ಅವರವರ "ಪಾಲನ್ನು" ಮುರಿದುಕೊಂಡಿರುತ್ತಾರೆ ಎಂದು ರಾಗವೆಳೆದಾಗ ಕೊನೆಗೆ ಉಳಿದುದರಲ್ಲಿ ತುಕ್ಕು ಹಿಡಿದ ಅಂಗಗಳಿಗೆ ಬಣ್ಣ ಹೊಡೆಯುವಷ್ಟೂ ಇರತ್ತೋ ಇಲ್ವೋ ಎಂದು ಮನಸ್ಸಿನಲ್ಲಿ ಯೋಚಿಸುತ್ತಿದ್ದೆ...

ಬೆಟ್ಟದ ಮೇಲೇರಿದ ಮೇಲೆ ಅಲ್ಲಿಂದ ಇವರು ಸೂಪರ್ ಬೆಡಗಿಯಂತೆ ಕಂಗೊಳಿಸುತ್ತಿದ್ದ ಪ್ರಕೃತಿಮಾತೆಯ ಹಲವಾರು ಛಾಯಾಚಿತ್ರಗಳನ್ನು ತೆಗೆದ ಮೇಲೆ ನಿಧಾನವಾಗಿ ಕೆಳಗಿಳಿದೆವು..ಹಾಗೆ ಸುತ್ತಲೂ ಇದ್ದ ಹಸಿರು ವಾತಾವರಣದಲ್ಲಿ ಕೇಳುತ್ತಿದ್ದ ಜಲಪಾತದ ಭೋರ್ಗರೆತವನ್ನು ಆಲಿಸುತ್ತ ನಾನೂ ಇವರೂ ಮೈ ಮರೆತು ಅಲ್ಲಿ ಹಾಕಲಾಗಿದ್ದ ಬೆಂಚಿನ ಮೇಲೆ ಸ್ವಲ್ಪ ಹೊತ್ತು ಕುಳಿತೆವು..ಇಬ್ಬರಿಗೂ ಹಸಿವು ಶುರುವಾಗಿತ್ತು..ಮಧ್ಯಾಹ್ನ ಒಂದು ಘಂಟೆ ಸಮಯ..ಊಟ ಮುಗಿಸಿ ಹತ್ತಿರವಿದ್ದ ಅತೀ ದೊಡ್ಡ cuckoo ಗಡಿಯಾರವನ್ನು ನೋಡಲು ಹೊಗಬೇಕಿತ್ತು..ಸ್ವಲ್ಪ ಸಾವಕಾಶವಾಗಿ ಕುಳಿತು ತಿನ್ನುವಂಥ ಜಾಗ ಹುಡುಕಿದ ಮೇಲೆ ಇಬ್ಬರೂ ಮನೆಯಿಂದ ತಂದಿದ್ದ ಆಲೂಪರೋಠಗಳನ್ನು ತಿಂದೆವು..ಹಸಿವು ನೀಗಿಸಿಕೊಂಡು ಅಲ್ಲೆ ಪಕ್ಕದಲ್ಲಿದ್ದ ಗಡಿಯಾರದಂಗಡಿಗೆ ಹೋಗಿ ಸುಮ್ಮನೆ ನೋಡೋಣ..ಬಸ್ಸಿಗೆ ಇನ್ನು ಅರ್ಧ ಘಂಟೆ ಇದೆ ಎಂದುಕೊಂಡು ಹೋದೆವು..ಸುಂದರವಾದ,ತರಹಾವರಿ ಗಡಿಯಾರಗಳಲ್ಲಿದ್ದವು..ಹಾಗೆಯೆ ರೇಟುಗಳೂ ತಲೆಯ ಮೇಲೆ ಹೊಡೆಯುವಂತಿದ್ದವು..ನಾನು ಇಲ್ಲಿ ಒಂದು ವಿಷಯ ಹೇಳಲೇಬೇಕು..ಹಿಂದಿನ ದಿನ ನಮ್ಮಿಬ್ಬರ ಮಧ್ಯೆ ಎನೋ ಮಾತಿಗೆ ಮಾತು ಬೆಳೆದು ಚಪಾತಿ ಲಟ್ಟಿಸುತ್ತಿದ್ದ ನಾನು, "ರೀ,ನಾನು ಲಟ್ಟಣಿಗೆಯನ್ನು ಬರೀ ಚಪಾತಿ ಲಟ್ಟಿಸಲು ಮಾತ್ರ ಉಪಯೋಸುತ್ತೇನೆ..ಅಲ್ವ" ಎಂದು ಇವರ ಕಾಲೆಳೆದೆ..ಇವರು "ಬಹಳ ಉಪಕಾರವಾಯ್ತು" ಎಂದು ಹೇಳುವ ಮಾದರಿ ದೈನ್ಯ ನಗೆ ಬೀರುವಂತೆ ನಟಿಸಿದರು..ಆ ಗಡಿಯಾರದಂಗಡಿಯಲ್ಲಿ ಇದ್ದಕ್ಕಿದ್ದ ಹಾಗೆ ಇವರು ಸ್ವಲ್ಪ ದೂರವಿದ್ದ ನನ್ನನ್ನು ಬಳಿಗೆ ಕರೆದು ಅವರು ನೋಡುತ್ತಿದ್ದ ಗಡಿಯಾರದತ್ತ ಬೆರಳು ತೋರುತ್ತ ನಗುತ್ತಿದ್ದರು..ನಾನು ಕುತೂಹಲದಿಂದ ಏನೆಂದು ಹತ್ತಿರ ಹೋಗಿ ನೋಡಿದೆ..ಆ ಛಾಯಾಚಿತ್ರವೇ ಕೆಳಗೆ ಬಲಭಾಗಲ್ಲಿದೆ ನೋಡಿ..ಇದು ಎಂತಹ ಕಾಕತಾಳೀಯ!!








ಈ ತರಹಾವರಿ ಗಡಿಯಾರಗಳನ್ನು ನೋಡಿದ ನಂತರ ನಾವಿಬ್ಬರೂ ಅತೀ ದೊಡ್ಡ ಗಡಿಯಾರವನ್ನು ನೋಡಲು ಬಸ್ಸು ಹಿಡಿದು ಹೊರಟೆವು.ಆಲ್ಲಿ ತಲುಪಿದಾಗ ೨ ಘಂಟೆ ಸಮೀಪಿಸುತ್ತಿತ್ತು..ಇವರು ಕ್ಯಾಮೆರ ಹಿಡಿದು ಸಿದ್ಧರಾಗಿದ್ದರು.ಸ್ವಲ್ಪ ಹತಾಶರಾದರೆಂದೇ ಹೇಳಬಹುದು.೨ ಸಾರಿ ಹಕ್ಕಿ ಹೊರಬಂದು ಕು ಕು..ಕು ಕು ಎಂದು ಒಳಗೆ ಹೋಗೇಬಿಟ್ಟಿತು..ನೋಡಲು ಅಷ್ಟೇನೂ ಚೆನ್ನಾಗಿ ಕೂಡ ಇರಲಿಲ್ಲ.ಆದರೂ ಅಲ್ಲಿಯವರೆಗೂ ಹೋಗಿದ್ದರಿಂದ ಒಮ್ಮೆ ಒಳಗೂ ಹೋಗಿ ನೋಡಬೇಕೆನ್ನಿಸಿ ಎರಡು ೨ ಆಯ್ರೋ ನಾಣ್ಯಗಳನ್ನು ಹಾಕಿ ಒಳಹೋದೆವು..ಅದರ ಛಾಯಾಚಿತ್ರಗಳು ಕೆಳಗಿವೆ.
ಇಷ್ಟೇ ಒಂದು ದಿನದ ಪ್ರವಾಸದ ಕಥೆ..ಮನೆಗೆ ಮರಳಿದೆವು..

Tuesday, June 16, 2009

My "ಸೂರು"

ಸರಳ,ಸುಂದರ ನಮ್ಮ ಮೈಸೂರು ನಗರಿ
ಬಹು ಆತ್ಮೀಯ ಜನರಿಲ್ಲಿ ಮಾತನಾಡಿಸುವ ಪರಿ
ಹೀಗೆನ್ನುತ್ತಿದೆ ನನ್ನ ಕಲ್ಪನಾಲಹರಿ
ನೆನೆದೊಡೆ ಅಲ್ಲಿದ್ದರೆ ನಾವು ಪುಣ್ಯವಂತರೇ ಸರಿ

ಕೇವಲ ಪ್ರಾಸ ಬಳಸಿದೊಡನೆ ಇದು ಕವಿತೆಯಲ್ಲ
ಕವಿತೆ ರಚಿಸಲು ನಾ ಕವಿಯೂ ಅಲ್ಲ
ಆದರೂ ಮೈಸೂರ ಹೊಗಳಲು ಮನ ಬಯಸುವುದಲ್ಲ
ಇದರ ಮರ್ಮ ಅವನೇ ಬಲ್ಲ

ಮನೆಯ ಕಡೆ ಹಿಡಿದೊಡೆ ಹಾದಿ
ಮಂಡ್ಯ ಕಂಡೊಡೆ ರಸ್ತೆಬದಿ
ನಮ್ಮೂರಿರುವುದು ಸನಿಹದಿ
ಎಂದರಿತಾಗ ನೆಮ್ಮದಿಗಿದು ತಳಹದಿ

ಒಂದೆಡೆ ಶ್ರೀರಂಗಪಟ್ಟಣ,ರಂಗನತಿಟ್ಟು
ಮತ್ತು ಕೃಷ್ಣರಾಜಸಾಗರ ಅಣೆಕಟ್ಟು
ಚಾಮುಂಡಿಬೆಟ್ಟದಿ ಹರಕೆ ತೊಟ್ಟು
ಸಾಗಬಹುದು ನಂಜನಗೂಡಿನತ್ತ ಹೆಜ್ಜೆಯಿಟ್ಟು

ಆಹಾ ಎಂತಹ ಸುಂದರ ನಗರ
ಒಮ್ಮೆ ನೋಡಬೇಕಿಲ್ಲಿ ದಸರ
ಹೊನ್ನ ಪಲ್ಲಕ್ಕಿಯಲ್ಲಿ ಮೆರಗುವ ದೇವರ
ಹಿಂದೆಯೇ ಬರುವ ಜನಸಾಗರ

ವಾತಾವರಣದಿ ಧೂಳಿಲ್ಲ
ಜನರ ಮನದಿ ಕಲ್ಮಶವಿಲ್ಲ
ಭಾಷೆಯಲ್ಲಿ ಹುಳುಕಿಲ್ಲ
ಬೆಂಗಳೂರಿನ ಗಾಳಿ ಇನ್ನು ಸೋಕಿಲ್ಲ

ಮತ್ತೂ ಬರೆಯಲು ಮನ ಬಯಸಿದರೂ
ಓದಬೇಕಲ್ಲವೆ ಜನರು?
ನಮ್ಮೂರಿನ ಮೆರಗ ಬಣ್ಣಿಸಲು ಬಾರದಿದ್ದರೂ
ಅದು ಬಹಳ ಚೆಂದವೋ ಎನ್ನುತಿದೆ ಎನ್ನುಸಿರು

ನಾನು ಸುಮಾರು ಹದಿನೈದು ವರ್ಷಗಳು ಸರಳವಾಗಿ, ಯಾವುದೇ ಝಂಝಾಟವಿಲ್ಲದೆ ಕಳೆಯುವುದಕ್ಕೆ ಕಾರಣವೇ ಮೈಸೂರು ಇರಬಹುದು..ಈ ಊರಿನಲ್ಲಿರುವ ಸರಳತೆಯನ್ನು ನಾನು ಬೆಂಗಳೂರಿನಲ್ಲಿ ಕಾಣಲಿಲ್ಲ..ನನಗೇನೂ ಹೆಚ್ಚು ಅನುಭವವಿಲ್ಲ..ಆದರೂ ಬಾಲ್ಯ ಹಾಗೂ ವಿದ್ಯಾರ್ಥಿಜೀವನ ಸಾಂಗವಾಗಿ ಸಾಗಿತೆಂದರೆ ಅರ್ಧ ಪ್ರಭಾವ ಈ ಊರಿನದು..ಎಲ್ಲ ಕನ್ನಡಿಗರೂ ಒಮ್ಮೆ ಬಂದು ಇಲ್ಲಿ ತಂಗಿ ನೆಮ್ಮದಿ ಎಂದರೇನೆಂದು ಕಂಡುಕೊಂಡು ಹೋಗಬಹುದಾದಂತಹ ಊರು..ಬೆಂಗಳೂರಿನಲ್ಲಿ ಸುಮಾರು ಎರಡು ವರ್ಷ ಇದ್ದ ಮೇಲೆ ನನಗೆ ಮೈಸೊರಿನ ವೈಶಿಷ್ಟ್ಯ ಅರಿವಾಗಿದ್ದು..ದೇವರೇ!ನಮ್ಮೂರು ಬೆಂಗಳೂರಿನಂತಾಗದಿರಲಿ ಎಂದೆಷ್ಟು ಬಾರಿ ಕೋರಿಕೊಂಡಿರುವೆನೋ..ಮೈಸೂರಿನ ನೆನಪು ಕಾಡುತ್ತದೆ..ಏನು ಮಾಡುವುದು..ಭಾರತಕ್ಕೆ ಮರಳಲು ಇನ್ನೂ ಸಮಯ ಬಂದಿಲ್ಲ..ಮಾನಸಗಂಗೋತ್ರಿಯ ತಂಪಾದ ವಾತಾವರಣ,ಕುಕ್ಕರಹಳ್ಳಿ ಕೆರೆಯ ಸರಳ ಸೌಂದರ್ಯ,ಚಾಮುಂಡಿ ಬೆಟ್ಟ ಹಾಗು ಒಂಟಿಕೊಪ್ಪಲ್ ವೆಂಕಟೇಶ್ವರ ದೇವಸ್ಥಾನದಲ್ಲೊದಗುವ ಸಮಾಧಾನ, ಗಾಯತ್ರಿ ಟಿಫಿನ್ ರೂಮ್ನತ್ತ ಸುಳಿದಾಗ ಮೂಗಿಗೆ ಬಡಿಯುವ ಬೆಣ್ಣೆ ಮಸಾಲೆ ದೊಸೆಯ ಪರಿಮಳ, ನಮ್ಮ ಕಾಲೇಜಿನಲ್ಲಿ ನಡೆಯುತ್ತಿದ್ದ ಆಟಪಾಠಗಳು - ಇವಕ್ಕೆಲ್ಲ ಮನಸ್ಸು ಹಾತೊರೆಯುತ್ತದೆ..ಯಾವಾಗಲೂ ಇಲ್ಲದ್ದಕ್ಕೆ ಆಸೆ ಪಡುವುದು ಸಹಜವಲ್ಲವೇ..
ಜೆ.ಪಿ.ನಗರ,ಜಯನಗರ,ಕುವೆಂಪುನಗರ,ಲಕ್ಷ್ಮಿಪುರಮ್,ವಿಜಯನಗರ ಹೀಗೆ ಹೆಸರುಗಳೆಲ್ಲ ಬೆಂಗಳೂರಿನಲ್ಲಿದ್ದರೂ ಸಹ ಅಜಗಜಾಂತರ ವ್ಯತ್ಯಾಸ..ಬೆಂಗಳೂರನ್ನು ನಾ ತೆಗಳುತ್ತಿಲ್ಲ..ಎಷ್ಟಾದರೂ ನಮ್ಮೂರು ನನಗೆ ಹೆಚ್ಚೇ..ಇದು ಕೇವಲ ನನ್ನ ಅನುಭವ,ಅಭಿಪ್ರಾಯ..ಮತ್ತೇನೂ ಬರೆಯಲು ತೋಚುತ್ತಿಲ್ಲ..ನೆನಪುಗಳು ಕಾಡುತ್ತಿವೆಯಷ್ಟೇ..

Wednesday, June 10, 2009

ಮುಖಭಂಗ






















ಅಂದು ನಮ್ಮ ಬಳಗದ ಒಬ್ಬರ ಮನೆಯಲ್ಲಿ ಸತ್ಯನಾರಾಯಣ ಪೂಜೆ.ಹತ್ತಾರು ಜನರನ್ನು ಆಹ್ವಾನಿಸಿದ್ದರು.ನಾನೂ ಸಹ ಹೋಗಿದ್ದೆ..ಹೆಂಗಳೆಯರೆಲ್ಲ ಒಂದು ಬದಿ ಚಾಪೆಯ ಮೇಲೆ ಪೂಜೆಯನ್ನು ನೋಡುತ್ತ ಕುಳಿತಿದ್ದರು.

ಪುರೋಹಿತರು ಸಾಂಗವಾಗಿ ಪೂಜೆಯನ್ನು ನಡೆಸಿಕೊಡುತ್ತಿದ್ದರು.ದಂಪತಿಗಳು ಬಹಳ ಶ್ರದ್ಧಾಭಕ್ತಿಯಿಂದ ವ್ರತ ಮಾಡುತ್ತಿದ್ದರು.ಬೇಕಾದಷ್ಟು ತರಹ ಹಣ್ಣು ಹೂವುಗಳನ್ನು ದೇವರಿಗೆಂದು ತಂದಿರಿಸಿದ್ದರು.ಅದಕ್ಕೆಂದೇ ಮಂಟಪದೆದುರು ಒಂದು ಪ್ರತ್ಯೇಕ ಚಾಪೆಯನ್ನು ಹಾಸಿದ್ದರು.ನಾನು ಹಿಂದಿನ ಪಂಕ್ತಿಯಲ್ಲಿ ಕುಳಿತಿದ್ದೆ.ಪೂಜೆಯ ಮಧ್ಯೆ ಒಬ್ಬಳು ಚೆಂದದ ಹುಡುಗಿ ಎಲ್ಲರಿಗೂ ಬಣ್ಣ ಬಣ್ಣದ ಕಾಗದದಿಂದ ಅರಿಶಿನ ಪೊಟ್ಟಣಕ್ಕೆಂದು ಮಾಡಿದ ಹೂಗಳನ್ನು ಕುಂಕುಮ ಕೊಟ್ಟು ಹಂಚುತ್ತಿದ್ದಳು.

ಸ್ವಲ್ಪ ದೂರದಲ್ಲಿ ಆಟವಾಡಿಕೊಂಡು ಕುಳಿತಿದ್ದ ಸುಮಾರು
ಮೂರು ವರ್ಷದ ಮುದ್ದಾದ ಪುಟ್ಟ ಮಗುವಿನೆಡೆಗೆ ನನ್ನ ಗಮನ ಹರಿಯಿತು.ಕೇಳಿ ತೆಗೆದುಕೊಂಡ ಕಾಗದದ ಹೂವನ್ನು ಅತೀ ಜಾಗರೂಕತೆಯಿಂದ ಬಿಡಿಸಿ ಪೊಟ್ಟಣವನ್ನು ಬೇರೆ ಮಾಡುತ್ತಿತ್ತು.ಆಗ ಅದರ ಹಿಂದೆಯೇ ಕುಳಿತಿದ್ದ ಒಬ್ಬಳು ಮಧ್ಯವಯಸ್ಸಿನ ಹೆಂಗಸು ಮಗುವಿನ ಜುಟ್ಟನ್ನು ಮೆಲ್ಲನೆ ಎಳೆದರು. ತಿರುಗಿ ನೋಡಿದ ಮಗುವನ್ನು ಮಾತನಾಡಿಸಲನುವಾದರು. ಹೆಸರೇನೆಂದು ಕೇಳಿ ಶುರು ಮಾಡಿದ ಮಾತುಕತೆ ಮುಂದುವರೆಯುತ್ತಲೇ ಇತ್ತು.ಆ ಹೆಂಗಸಿಗೆ ಮಕ್ಕಳನ್ನು ಕಂಡರೆ ಬಹಳ ಇಷ್ಟವಿರುವಂತೆ ತೋರುತ್ತಿತ್ತು. ಮಗುವೂ ಮುದ್ದು ಮುದ್ದಾಗಿ ಅವರು ಕೇಳಿದ ಪ್ರಶ್ನೆಗಳಿಗೆಲ್ಲಾ ಉತ್ತರ ಕೊಡುತ್ತಿತ್ತು. A,B,C ಹೇಳಿಸಿದರು. ಅ,ಆ,ಇ,ಈ ಇವರು ಕೇಳಳಿಲ್ಲ..ಮಗುವೂ ಹೇಳಲಿಲ್ಲ..Rhymes ಹೇಳಿಸಿದರು..ಒಂದಾದಮೇಲೊಂದು ಬಿಡುವಿಲ್ಲದೆ ಆ ಚೂಟಿ ಮಗು ಹೇಳುತ್ತಲೇ ಇತ್ತು..ಆಗಾಗಲೇ ಸಾಕಷ್ಟು ಜನರ ಗಮನ ಇತ್ತ ಕಡೆ ಹರಿದಿತ್ತು..ಪುರೋಹಿತರು ಒಮ್ಮೆ "ಸದ್ದು!" ಎಂದು ಕೂಗಿದ್ದೂ ಆಯ್ತು..ಆದರೂ ಆ ಹೆಂಗಸು ಮತ್ತು ಮಗುವಿನ ಸಂಭಾಷಣೆ ಮುಗಿಯುವಂತೆ ಕಾಣಲಿಲ್ಲ..ಮಗು ಬೆಕ್ಕು,ಆನೆ,ಹುಲಿಗಳ ಹಾಗೆ ಸದ್ದು ಮಾಡಿ ತನ್ನ ಪ್ರತಿಭೆಯನ್ನು ತೋರಿಸಿತು..ನಂತರ "ನಾಯಿ ಹೇಗೆ ಬೊಗಳುತ್ತೆ ಚಿನ್ನ" ಎಂದು ಕೇಳಿದರು..ಮಗು ತನ್ನ ಸಣ್ಣ ಧ್ವನಿಯಲ್ಲಿ "ಬೌ" ಎಂದಿತು..ಆ ಹೆಂಗಸು "No dog in this world barks so softly" ಎಂದು ಹೇಳಿದರು..ಅದಕ್ಕೆ ಮಗು ಸ್ವಲ್ಪ ಜೋರಾಗಿ "ಬೌ ಬೌ" ಎಂದಿತು..ಆ ಹೆಂಗಸು ನಕ್ಕು,"ಇಷ್ಟೆನೆ..ನೋಡು..ಹೀಗೆ..ಬೌ ಬೌ ವೌ" ಎಂದು ಸ್ವಲ್ಪ ದೊಡ್ಡ ದನಿಯಲ್ಲಿ ಸದ್ದು ಮಾಡಿದರು..ಅವರನ್ನೆ ನೋಡುತ್ತಿದ್ದ ಚುರುಕು ಬುದ್ಧಿಯ ಮಗು ತನ್ನ ಬಲಗೈಯ ಕೈಬೆರಳುಗನೆಲ್ಲ ಮುದ್ದು ಮುದ್ದಾಗಿ ಜೋಡಿಸಿ ಮುಂದಕ್ಕೆ ಚಾಚಿ ಏನೋ ಕೊಡುವಂತೆ ನಟಿಸುತ್ತ "ತ್ಚು ತ್ಚು ತ್ಚು" ಎಂದು ಹೇಳಿತು!!!!!
ಆಹಾ..ಆ ಪುಟ್ಟ ಮಗುವಿನ ದನಿಯಲ್ಲಿ ಎಷ್ಟು ವ್ಯಂಗ್ಯ!ಒಂದು ನಿಮಿಷ ಇದು ನಿಜವಾಗಿಯು ಅಷ್ಟು ಚಿಕ್ಕ ಮಗುವೇ ಎನ್ನಿಸಿತು...ಅಲ್ಲಿದ್ದವರಲ್ಲಿ ಕೆಲವರಿಗೆ ನಗು ಬಂತು..ಆದರೂ ನಕ್ಕು ಅಪದ್ಧವಾಗುವುದು ಬೇಡವೆಂದು ಆ ಮಗುವನ್ನು ಮನಸ್ಸಿನಲ್ಲೇ ಹೊಗಳುತ್ತಿದ್ದರು..ಮತ್ತೆ ಕೆಲವರು ತೆಗಳುತ್ತಿದ್ದರೋ ಏನೋ..ಆ ಮಗುವಿನ ಬುದ್ಧಿ ಸ್ವಲ್ಪ ವಕ್ರವೆನಿಸಿದರೂ ಚುರುಕು ಎನ್ನುವುದಂತೂ ಒಪ್ಪುವ ವಿಷಯವೇ..ಅವರಿಬ್ಬರ ಸಂಭಾಷಣೆ ಆಲ್ಲಿಗೆ ಮುಗಿಯಿತು..ಅಷ್ಟರಲ್ಲಿ ಮಂಗಳಾರತಿಗೆಂದು ಜನ ಏಳುತ್ತಿದ್ದನ್ನು ನೋಡಿ ಸತ್ಯನಾರಾಯಣ ಪೂಜೆಯ ಪ್ರಸಾದವನ್ನು ನೆನೆಸಿಕೊಳ್ಳುತ್ತಿದ್ದೆ..ಇದ್ದಕ್ಕಿದ್ದಂತೆ ಹಸಿವು ಹೆಚ್ಚಾದಂತೆ ಭಾಸವಾಯಿತು..ಆ ಮಗುವಿನ ಹೆಸರು ನೆನಪಿಲ್ಲದಿದ್ದರೂ ಅದೇಕೋ ಈ ಸಣ್ಣ ಘಟನೆಯ ನೆನಪು ಮಾಸದೆ ಇನ್ನೂ ಉಳಿದಿದೆ..