Friday, July 31, 2009

ಟ್ರಿಬೆರ್ಗ್ ಪ್ರವಾಸ













ಮೊನ್ನೆ ನಾನೂ ಇವರೂ ಬೆಳಗ್ಗೆ ಬೇಗನೆ ಸಿದ್ಧರಾಗಿ ಹೊರಟೆವು..
7 40 ಕ್ಕೆ ಟ್ರಾಮ್ ಹಿಡಿದು ಫ್ರೈಬುರ್ಗ್ ರೈಲು ನಿಲ್ದಾಣಕ್ಕೆ ಹೋದೆವು..ಅಂದು ಸೋಮವಾರ ಪಬ್ಲಿಕ್ ಹಾಲಿಡೇ ಯಾಗಿದ್ದರಿಂದ ನಮ್ಮಂತಯೇ ಇನ್ನೆಷ್ಟು ಜನ ಹೀಗೆ ಪ್ರವಾಸವನ್ನು ಕೈಗೊಂಡಿದ್ದರೋ..ಒಟ್ಟಿನಲ್ಲಿ ಒಫ್ಫೆನ್ಬುರ್ಗ್ ಟ್ರೇನಿನಲ್ಲಿ ಹೆಚ್ಚು ಜನರಿದ್ದರು..ನಾನು ಪೂರ್ಣ ಚಂದ್ರ ತೇಜಸ್ವಿಯವರ ಒಂದು ಪುಸ್ತಕವನ್ನು ಹಿಡಿದು ಕುಳಿತೆ..ಕಾದಂಬರಿ ಮುಗಿಯುವ ಹಂತದಲ್ಲಿದ್ದರಿಂದಲೋ ಎನೋ ನನಗೆ ಸಮಯ ಹೋದದ್ದೇ ಗೊತ್ತಾಗಲಿಲ್ಲ..ಇವರೂ ಕೂಡ ನನ್ನ ಕಾಟ ಇಲ್ಲದೆ ಒಂದು ಸ್ವಲ್ಪ ಹೊತ್ತು ನೆಮ್ಮದಿಯಿಂದ ನಿದ್ದೆ ಹೋದರು..ಇವರಿಗೆ ಅಂಥ ಅವಕಾಶ ಸಿಕ್ಕುವುದು ಅಪರೂಪವೇ ಪಾಪ..:)
ಒಫ್ಫೆನ್ಬುರ್ಗ್ ತಲುಪಿದ ಮೇಲೆ ನಾವಿಬ್ಬರೂ ಕೈ ಕೈ ಹಿಡಿದು ಪ್ಲಾಟ್ಫಾರ್ಮ್ ಬದಲಾಯಿಸಿ ಟ್ರಿಬೆರ್ಗ್ ಟ್ರೇನನ್ನು ಹಿಡಿದೆವು..ಇಲ್ಲಿ ಒಂದು ರಾಜ್ಯಕ್ಕೆ ಸೀಮಿತವಾದ ಟಿಕೆಟ್ ಅನ್ನು ಕೊಂಡರೆ ಟ್ರೇನ್ ಬಸ್ಸುಗಳಲ್ಲಿ ಎಲ್ಲಿಗೆ ಬೇಕಾದರೂ ಹೋಗಬಹುದು..ನಾವು ತಲುಪಿದ ಮೇಲೆ ಟ್ರಿಬೆರ್ಗ್ ಸ್ಟೇಷನ್ನಿನಲ್ಲಿ ಕೆಲವು ಭಾರತೀಯರನ್ನು ಕಂಡೆವು..ಏನೋ ಬಹಳ ಪರಿಚಯದವರಂತೆ ನೋಡಿ ನಕ್ಕೆವು..ನಮ್ಮ ದೇಶದಲ್ಲಿದ್ದಾಗ ಒಮ್ಮೆಯಾದರೂ ಅಪರಿಚಿತರಿಗೆ ನಗೆ ಬೀರಿದ್ದು ನೆನಪಿಲ್ಲ..ಇಲ್ಲಿ ಬಂದ ಮೇಲೆ ಯಾರಾದರೂ ನಮ್ಮವರು ಸಿಕ್ಕರೆ ಮೈಸೂರಿನಲ್ಲಿ ಪಕ್ಕದ ಮನೆಯವರೊಡನೆ ಇದ್ದ ಸೌಹಾರ್ದಕ್ಕಿಂತ ಹೆಚ್ಚು ಆತ್ಮೀಯತೆಯಿಂದ ಹಲ್ಲುಗಿಂಜುತ್ತೇವೆ..ಹಿತ್ತಲ ಗಿಡ ಎಲ್ಲಿ ಮದ್ದು..ನಾನು ಮತ್ತೇನೋ ಮಾತನಾಡಲು ಆರಂಭಿಸಿ ಬರೆಯಬೇಕಾದ್ದ ವಿಷಯದಿಂದ ದೂರ ಸರಿಯುತಿದ್ದೇನೆ..ಟ್ರಿಬೆರ್ಗ್ ಬಸ್ಸು ನಿಲ್ದಾಣದಿಂದ ಬಸ್ಸು ಹಿಡಿದು ಬೆಟ್ಟದ ಮೇಲೆ ಹೋದೆವು..ಇವರು ಒಳ್ಳೆಯ ಛಾಯಾಚಿತ್ರಕಾರರು..ಕ್ಯಾಮೆರ,ಟ್ರೈಪಾಡ್ ಕೈಯಲ್ಲಿದ್ದರೆ ನನ್ನ ಇರುವನ್ನೂ ಮರೆತುಬಿಡುತ್ತಾರೆ (ನಾ ಕ್ಯಾಮೆರ ಮುಂದೆ ಇಲ್ಲದ ಹೊರತು..:))ಪ್ರಕೃತಿಯ ಸೌಂದರ್ಯವನ್ನು ಆ ಯಂತ್ರದಲ್ಲಿ ಹಿಡಿದಿಟ್ಟುಕೊಳ್ಳುವುದೆಂದರೆ ಇವರಿಗೆ ಅಚ್ಚುಮೆಚ್ಚು..ನಾನು ಸುಂದರ ಚಿತ್ರಗಳನ್ನು ಕಣ್ಣಿನಲ್ಲಿ ತುಂಬಿಕೊಳ್ಳಲು ಪ್ರಯತ್ನಿಸುತ್ತೇನೆ..ಅದಕ್ಕೆ ಇರಬೇಕು ಮೂರೂ ಹೊತ್ತು ಇವರತ್ತ ನೋಡಿ ನೋಡಿ ಬೇಸರ ಹುಟ್ಟಿಸುತ್ತೇನೆ! :)


ಅದೊಂದು ಚಿಕ್ಕ ಜಲಪಾತ..ಸುಂದರವಾದ ಜಾಗ..ಹಲವಾರು ಪ್ರವಾಸಿಗರು ಬಂದಿದ್ದರು..ಮಧ್ಯ ವಯಸ್ಕರು ಚಿಕ್ಕ ಮಕ್ಕಳನ್ನು ಪ್ರಾಮ್ನಲ್ಲಿ ತಳ್ಳುತ್ತಾ, ಮತ್ತು ಕೆಲವರು ಅವರ ಮಕ್ಕಳ ಕೈ ಹಿಡಿದು, ಪ್ರೇಮಿಗಳು ಒಬ್ಬರನ್ನೊಬ್ಬರು ಬಳಸಿ, ಇನ್ನು ಕೆಲವರು ನಾಯಿಯ ಚೇನ್ ಕೈಯಲ್ಲಿ ಹಿಡಿದು, ಮತ್ಯಾರೋ ಕೋಲು ಹಿಡಿದು, ಇವೇನು ಇಲ್ಲದೆ ಒಂಟಿಯಾಗಿ ಬಂದವರು ಕ್ಯಾಮೆರಾ ಹಿಡಿದು ಜಲಪಾತದ ಪಕ್ಕ ಮೇಲೇರಲು ಮಾಡಿದ್ದ ಹಾದಿಯಲ್ಲಿ ಹೋಗುತ್ತಿದ್ದರು..ಬಹುಮಂದಿ ಕಡಲೆಕಾಯಿ ಕವರುಗಳನ್ನು ಇಟ್ಟುಕೊಂಡಿದ್ದರು..ಈ ಜಾಗದಲ್ಲಿ ಅಳಿಲುಗಳಿವೆಯಾದ್ದರಿಂದ ಅವುಗಳನ್ನು ಸೆಳೆಯೆಲು ಕಡಲೆಕಾಯಿ ಹಾಕುತ್ತಿದ್ದರು..ಒಂದು ಆಶ್ಚರ್ಯದ ಸಂಗತಿಯೆಂದರೆ ಸುಮಾರು ಐನೂರು ಅಡಿ ಎತ್ತರವಿರುವ ಈ ಜಲಪಾತದಿಂದ ನಮ್ಮ ಗಗನಚುಕ್ಕಿ ಭರಚುಕ್ಕಿ ಎರಡರಿಂದ ಒಟ್ಟು ಉತ್ಪಾದನೆಯಾಗುವ ವಿದ್ಯುತ್ತಿಗಿಂದ ಹೆಚ್ಚಾಗುತ್ತದೆ ಎಂದು ಇವರು ಹೇಳಿದರು..ಇಲ್ಲಿಯ ಟರ್ಬೈನ್ಗಳು ಉನ್ನತಮಟ್ಟದ್ದೆಂದು ಹೇಳಿದರು..ನಮ್ಮಲ್ಲಿಯೂ ಹೀಗೇ ಮಾಡಲಾಗುವುದಿಲ್ಲವೆ ಎಂದು ನಾನು ಯೊಚಿಸುತ್ತಿದ್ದಾಗ ಇವರು ನಮ್ಮ ಸರ್ಕಾರ ಹೀಗೆ ಗುಣಮಟ್ಟ ವರ್ಧನೆಗೆ ಎಷ್ಟು ಬಾರಿ ಹಣ ಗ್ರ್ಯಾಂಟ್ ಮಾಡಿರುತ್ತಾರೋ..ಅದು ತಲುಪಬೇಕಾದ ಸ್ಥಳಕ್ಕೆ ತಲುಪಿದರೆ ತಾನೆ..ಮಧ್ಯದಲ್ಲೆ ಎಲ್ಲರೂ ಅವರವರ "ಪಾಲನ್ನು" ಮುರಿದುಕೊಂಡಿರುತ್ತಾರೆ ಎಂದು ರಾಗವೆಳೆದಾಗ ಕೊನೆಗೆ ಉಳಿದುದರಲ್ಲಿ ತುಕ್ಕು ಹಿಡಿದ ಅಂಗಗಳಿಗೆ ಬಣ್ಣ ಹೊಡೆಯುವಷ್ಟೂ ಇರತ್ತೋ ಇಲ್ವೋ ಎಂದು ಮನಸ್ಸಿನಲ್ಲಿ ಯೋಚಿಸುತ್ತಿದ್ದೆ...

ಬೆಟ್ಟದ ಮೇಲೇರಿದ ಮೇಲೆ ಅಲ್ಲಿಂದ ಇವರು ಸೂಪರ್ ಬೆಡಗಿಯಂತೆ ಕಂಗೊಳಿಸುತ್ತಿದ್ದ ಪ್ರಕೃತಿಮಾತೆಯ ಹಲವಾರು ಛಾಯಾಚಿತ್ರಗಳನ್ನು ತೆಗೆದ ಮೇಲೆ ನಿಧಾನವಾಗಿ ಕೆಳಗಿಳಿದೆವು..ಹಾಗೆ ಸುತ್ತಲೂ ಇದ್ದ ಹಸಿರು ವಾತಾವರಣದಲ್ಲಿ ಕೇಳುತ್ತಿದ್ದ ಜಲಪಾತದ ಭೋರ್ಗರೆತವನ್ನು ಆಲಿಸುತ್ತ ನಾನೂ ಇವರೂ ಮೈ ಮರೆತು ಅಲ್ಲಿ ಹಾಕಲಾಗಿದ್ದ ಬೆಂಚಿನ ಮೇಲೆ ಸ್ವಲ್ಪ ಹೊತ್ತು ಕುಳಿತೆವು..ಇಬ್ಬರಿಗೂ ಹಸಿವು ಶುರುವಾಗಿತ್ತು..ಮಧ್ಯಾಹ್ನ ಒಂದು ಘಂಟೆ ಸಮಯ..ಊಟ ಮುಗಿಸಿ ಹತ್ತಿರವಿದ್ದ ಅತೀ ದೊಡ್ಡ cuckoo ಗಡಿಯಾರವನ್ನು ನೋಡಲು ಹೊಗಬೇಕಿತ್ತು..ಸ್ವಲ್ಪ ಸಾವಕಾಶವಾಗಿ ಕುಳಿತು ತಿನ್ನುವಂಥ ಜಾಗ ಹುಡುಕಿದ ಮೇಲೆ ಇಬ್ಬರೂ ಮನೆಯಿಂದ ತಂದಿದ್ದ ಆಲೂಪರೋಠಗಳನ್ನು ತಿಂದೆವು..ಹಸಿವು ನೀಗಿಸಿಕೊಂಡು ಅಲ್ಲೆ ಪಕ್ಕದಲ್ಲಿದ್ದ ಗಡಿಯಾರದಂಗಡಿಗೆ ಹೋಗಿ ಸುಮ್ಮನೆ ನೋಡೋಣ..ಬಸ್ಸಿಗೆ ಇನ್ನು ಅರ್ಧ ಘಂಟೆ ಇದೆ ಎಂದುಕೊಂಡು ಹೋದೆವು..ಸುಂದರವಾದ,ತರಹಾವರಿ ಗಡಿಯಾರಗಳಲ್ಲಿದ್ದವು..ಹಾಗೆಯೆ ರೇಟುಗಳೂ ತಲೆಯ ಮೇಲೆ ಹೊಡೆಯುವಂತಿದ್ದವು..ನಾನು ಇಲ್ಲಿ ಒಂದು ವಿಷಯ ಹೇಳಲೇಬೇಕು..ಹಿಂದಿನ ದಿನ ನಮ್ಮಿಬ್ಬರ ಮಧ್ಯೆ ಎನೋ ಮಾತಿಗೆ ಮಾತು ಬೆಳೆದು ಚಪಾತಿ ಲಟ್ಟಿಸುತ್ತಿದ್ದ ನಾನು, "ರೀ,ನಾನು ಲಟ್ಟಣಿಗೆಯನ್ನು ಬರೀ ಚಪಾತಿ ಲಟ್ಟಿಸಲು ಮಾತ್ರ ಉಪಯೋಸುತ್ತೇನೆ..ಅಲ್ವ" ಎಂದು ಇವರ ಕಾಲೆಳೆದೆ..ಇವರು "ಬಹಳ ಉಪಕಾರವಾಯ್ತು" ಎಂದು ಹೇಳುವ ಮಾದರಿ ದೈನ್ಯ ನಗೆ ಬೀರುವಂತೆ ನಟಿಸಿದರು..ಆ ಗಡಿಯಾರದಂಗಡಿಯಲ್ಲಿ ಇದ್ದಕ್ಕಿದ್ದ ಹಾಗೆ ಇವರು ಸ್ವಲ್ಪ ದೂರವಿದ್ದ ನನ್ನನ್ನು ಬಳಿಗೆ ಕರೆದು ಅವರು ನೋಡುತ್ತಿದ್ದ ಗಡಿಯಾರದತ್ತ ಬೆರಳು ತೋರುತ್ತ ನಗುತ್ತಿದ್ದರು..ನಾನು ಕುತೂಹಲದಿಂದ ಏನೆಂದು ಹತ್ತಿರ ಹೋಗಿ ನೋಡಿದೆ..ಆ ಛಾಯಾಚಿತ್ರವೇ ಕೆಳಗೆ ಬಲಭಾಗಲ್ಲಿದೆ ನೋಡಿ..ಇದು ಎಂತಹ ಕಾಕತಾಳೀಯ!!








ಈ ತರಹಾವರಿ ಗಡಿಯಾರಗಳನ್ನು ನೋಡಿದ ನಂತರ ನಾವಿಬ್ಬರೂ ಅತೀ ದೊಡ್ಡ ಗಡಿಯಾರವನ್ನು ನೋಡಲು ಬಸ್ಸು ಹಿಡಿದು ಹೊರಟೆವು.ಆಲ್ಲಿ ತಲುಪಿದಾಗ ೨ ಘಂಟೆ ಸಮೀಪಿಸುತ್ತಿತ್ತು..ಇವರು ಕ್ಯಾಮೆರ ಹಿಡಿದು ಸಿದ್ಧರಾಗಿದ್ದರು.ಸ್ವಲ್ಪ ಹತಾಶರಾದರೆಂದೇ ಹೇಳಬಹುದು.೨ ಸಾರಿ ಹಕ್ಕಿ ಹೊರಬಂದು ಕು ಕು..ಕು ಕು ಎಂದು ಒಳಗೆ ಹೋಗೇಬಿಟ್ಟಿತು..ನೋಡಲು ಅಷ್ಟೇನೂ ಚೆನ್ನಾಗಿ ಕೂಡ ಇರಲಿಲ್ಲ.ಆದರೂ ಅಲ್ಲಿಯವರೆಗೂ ಹೋಗಿದ್ದರಿಂದ ಒಮ್ಮೆ ಒಳಗೂ ಹೋಗಿ ನೋಡಬೇಕೆನ್ನಿಸಿ ಎರಡು ೨ ಆಯ್ರೋ ನಾಣ್ಯಗಳನ್ನು ಹಾಕಿ ಒಳಹೋದೆವು..ಅದರ ಛಾಯಾಚಿತ್ರಗಳು ಕೆಳಗಿವೆ.
ಇಷ್ಟೇ ಒಂದು ದಿನದ ಪ್ರವಾಸದ ಕಥೆ..ಮನೆಗೆ ಮರಳಿದೆವು..

7 comments:

  1. ... ombattu hattu pravasada kathe heegittu :D

    ReplyDelete
  2. Hmmm. Eegina kaalada hendatiyaru tumba joru. Paapa ganDandiru.

    ReplyDelete
  3. ಪ್ರಕಾಶ್August 17, 2009 at 12:36 AM

    ಪ್ರವಾಸ ಕಥನ ಹಾಗೂ ಛಾಯಾಚಿತ್ರಗಳು ಚೆನ್ನಾಗಿವೆ. ಇಂಥ ಗಡಿಯಾರಗಳನ್ನು ನೋದಲು ೧೨ ಘಂಟೆಗೆ ಹೋದರೆ ಸಾಕಷ್ಟು ಸಮಯ ಗಂಟೆ ಬಾರಿಸುವುದನ್ನು ನೋಡಬಹುದು.
    -ಅಣ್ಣ

    ReplyDelete
  4. nimm blog nange vandatara ishta.

    ಏನೋ ಬಹಳ ಪರಿಚಯದವರಂತೆ ನೋಡಿ ನಕ್ಕೆವು..ನಮ್ಮ ದೇಶದಲ್ಲಿದ್ದಾಗ ಒಮ್ಮೆಯಾದರೂ ಅಪರಿಚಿತರಿಗೆ ನಗೆ ಬೀರಿದ್ದು ನೆನಪಿಲ್ಲ..ಇಲ್ಲಿ ಬಂದ ಮೇಲೆ ಯಾರಾದರೂ ನಮ್ಮವರು ಸಿಕ್ಕರೆ ಮೈಸೂರಿನಲ್ಲಿ ಪಕ್ಕದ ಮನೆಯವರೊಡನೆ ಇದ್ದ ಸೌಹಾರ್ದಕ್ಕಿಂತ ಹೆಚ್ಚು ಆತ್ಮೀಯತೆಯಿಂದ ಹಲ್ಲುಗಿಂಜುತ್ತೇವೆ...

    e vakyagalu thumba istha adva. kanditha nijja

    barithaairi

    ReplyDelete
  5. @Sats
    ಕೂಲಂಕಶವಾಗಿ ಓದಿರುವುದಕ್ಕೆ ಹಾಗು ಅಭಿಪ್ರಾಯ ತಿಳಿಸಿದುದಕ್ಕೆ ಧನ್ಯವಾದಗಳು..:)
    @ಪ್ರಕಾಶ್
    ಅಣ್ಣ..ನಿಜ..ಹೋಗೋಕೆ ಮೊದಲು ನಿಮ್ಮನ್ನು ಕೇಳಿದ್ದರೆ ಈ ಉಪಾಯವು ಕೈಗೂಡುತಿತ್ತೇನೋ
    @V
    ಎಲ್ಲಾ ಗಂಡಸರದ್ದೂ ಒಂದೇ ಅಭಿಪ್ರಾಯ ಬಿಡಿ..ಅದರ ಬಗ್ಗೆ ಏಕೆ ಚರ್ಚೆ
    @deepa
    ಒಂದು ಸೊನ್ನೆ ನೀವ್ ಓದಿದ್ದು ಖುಶಿ ತಂದಿತ್ತು

    ReplyDelete
  6. "ನಾವು ತಲುಪಿದ ಮೇಲೆ ಟ್ರಿಬೆರ್ಗ್ ಸ್ಟೇಷನ್ನಿನಲ್ಲಿ ಕೆಲವು ಭಾರತೀಯರನ್ನು ಕಂಡೆವು..ಏನೋ ಬಹಳ ಪರಿಚಯದವರಂತೆ ನೋಡಿ ನಕ್ಕೆವು..ನಮ್ಮ ದೇಶದಲ್ಲಿದ್ದಾಗ ಒಮ್ಮೆಯಾದರೂ ಅಪರಿಚಿತರಿಗೆ ನಗೆ ಬೀರಿದ್ದು ನೆನಪಿಲ್ಲ"

    Illi US nalli ulta. Americans "Hello. How do you do?" antha heLi nagthaare. Indians noDidru noDadavara haage hogbidthaare. Aaadre thamma bhaasheyavaru sikkidare relatives thara greet maadthaare, which I'm not too fond of. India dalli naavenu marketnalli sikkidavarigella parichaya maadkoLokke try maadthiva? Eno vichithra..

    ReplyDelete
  7. ದೀಪ್ತಿಯವರೇ..ವಿಶಾದಕರವಾದ ವಿಷಯ..ಆದ್ರೆ ಎಲ್ಲ ಭಾರತೀಯರಲ್ಲೂ ಆದೇ ಮನಸ್ಥಿತಿ ಇರೋಲ್ವೇನೋ ಅನ್ಕೋತೀನಿ..ನನಗೆ ಹೆಚ್ಚು U.Sಅಲ್ಲಿರೋ lifesyle ಬಗ್ಗೆ ಗೊತ್ತಿಲ್ಲ, ಆ ವಿಶಯವಾಗಿ ಏನಾದ್ರು ಹೇಳೋಣ ಅಂದ್ರೆ..ಬೇಗ ಜನರಲ್ಲಿರೋ mindset ಸುಧಾರಿಸ್ಲಿ ಅಂತ ಮಾತ್ರ ಆಶಿಸಬಲ್ಲೆ..

    ReplyDelete