Tuesday, June 16, 2009

My "ಸೂರು"

ಸರಳ,ಸುಂದರ ನಮ್ಮ ಮೈಸೂರು ನಗರಿ
ಬಹು ಆತ್ಮೀಯ ಜನರಿಲ್ಲಿ ಮಾತನಾಡಿಸುವ ಪರಿ
ಹೀಗೆನ್ನುತ್ತಿದೆ ನನ್ನ ಕಲ್ಪನಾಲಹರಿ
ನೆನೆದೊಡೆ ಅಲ್ಲಿದ್ದರೆ ನಾವು ಪುಣ್ಯವಂತರೇ ಸರಿ

ಕೇವಲ ಪ್ರಾಸ ಬಳಸಿದೊಡನೆ ಇದು ಕವಿತೆಯಲ್ಲ
ಕವಿತೆ ರಚಿಸಲು ನಾ ಕವಿಯೂ ಅಲ್ಲ
ಆದರೂ ಮೈಸೂರ ಹೊಗಳಲು ಮನ ಬಯಸುವುದಲ್ಲ
ಇದರ ಮರ್ಮ ಅವನೇ ಬಲ್ಲ

ಮನೆಯ ಕಡೆ ಹಿಡಿದೊಡೆ ಹಾದಿ
ಮಂಡ್ಯ ಕಂಡೊಡೆ ರಸ್ತೆಬದಿ
ನಮ್ಮೂರಿರುವುದು ಸನಿಹದಿ
ಎಂದರಿತಾಗ ನೆಮ್ಮದಿಗಿದು ತಳಹದಿ

ಒಂದೆಡೆ ಶ್ರೀರಂಗಪಟ್ಟಣ,ರಂಗನತಿಟ್ಟು
ಮತ್ತು ಕೃಷ್ಣರಾಜಸಾಗರ ಅಣೆಕಟ್ಟು
ಚಾಮುಂಡಿಬೆಟ್ಟದಿ ಹರಕೆ ತೊಟ್ಟು
ಸಾಗಬಹುದು ನಂಜನಗೂಡಿನತ್ತ ಹೆಜ್ಜೆಯಿಟ್ಟು

ಆಹಾ ಎಂತಹ ಸುಂದರ ನಗರ
ಒಮ್ಮೆ ನೋಡಬೇಕಿಲ್ಲಿ ದಸರ
ಹೊನ್ನ ಪಲ್ಲಕ್ಕಿಯಲ್ಲಿ ಮೆರಗುವ ದೇವರ
ಹಿಂದೆಯೇ ಬರುವ ಜನಸಾಗರ

ವಾತಾವರಣದಿ ಧೂಳಿಲ್ಲ
ಜನರ ಮನದಿ ಕಲ್ಮಶವಿಲ್ಲ
ಭಾಷೆಯಲ್ಲಿ ಹುಳುಕಿಲ್ಲ
ಬೆಂಗಳೂರಿನ ಗಾಳಿ ಇನ್ನು ಸೋಕಿಲ್ಲ

ಮತ್ತೂ ಬರೆಯಲು ಮನ ಬಯಸಿದರೂ
ಓದಬೇಕಲ್ಲವೆ ಜನರು?
ನಮ್ಮೂರಿನ ಮೆರಗ ಬಣ್ಣಿಸಲು ಬಾರದಿದ್ದರೂ
ಅದು ಬಹಳ ಚೆಂದವೋ ಎನ್ನುತಿದೆ ಎನ್ನುಸಿರು

ನಾನು ಸುಮಾರು ಹದಿನೈದು ವರ್ಷಗಳು ಸರಳವಾಗಿ, ಯಾವುದೇ ಝಂಝಾಟವಿಲ್ಲದೆ ಕಳೆಯುವುದಕ್ಕೆ ಕಾರಣವೇ ಮೈಸೂರು ಇರಬಹುದು..ಈ ಊರಿನಲ್ಲಿರುವ ಸರಳತೆಯನ್ನು ನಾನು ಬೆಂಗಳೂರಿನಲ್ಲಿ ಕಾಣಲಿಲ್ಲ..ನನಗೇನೂ ಹೆಚ್ಚು ಅನುಭವವಿಲ್ಲ..ಆದರೂ ಬಾಲ್ಯ ಹಾಗೂ ವಿದ್ಯಾರ್ಥಿಜೀವನ ಸಾಂಗವಾಗಿ ಸಾಗಿತೆಂದರೆ ಅರ್ಧ ಪ್ರಭಾವ ಈ ಊರಿನದು..ಎಲ್ಲ ಕನ್ನಡಿಗರೂ ಒಮ್ಮೆ ಬಂದು ಇಲ್ಲಿ ತಂಗಿ ನೆಮ್ಮದಿ ಎಂದರೇನೆಂದು ಕಂಡುಕೊಂಡು ಹೋಗಬಹುದಾದಂತಹ ಊರು..ಬೆಂಗಳೂರಿನಲ್ಲಿ ಸುಮಾರು ಎರಡು ವರ್ಷ ಇದ್ದ ಮೇಲೆ ನನಗೆ ಮೈಸೊರಿನ ವೈಶಿಷ್ಟ್ಯ ಅರಿವಾಗಿದ್ದು..ದೇವರೇ!ನಮ್ಮೂರು ಬೆಂಗಳೂರಿನಂತಾಗದಿರಲಿ ಎಂದೆಷ್ಟು ಬಾರಿ ಕೋರಿಕೊಂಡಿರುವೆನೋ..ಮೈಸೂರಿನ ನೆನಪು ಕಾಡುತ್ತದೆ..ಏನು ಮಾಡುವುದು..ಭಾರತಕ್ಕೆ ಮರಳಲು ಇನ್ನೂ ಸಮಯ ಬಂದಿಲ್ಲ..ಮಾನಸಗಂಗೋತ್ರಿಯ ತಂಪಾದ ವಾತಾವರಣ,ಕುಕ್ಕರಹಳ್ಳಿ ಕೆರೆಯ ಸರಳ ಸೌಂದರ್ಯ,ಚಾಮುಂಡಿ ಬೆಟ್ಟ ಹಾಗು ಒಂಟಿಕೊಪ್ಪಲ್ ವೆಂಕಟೇಶ್ವರ ದೇವಸ್ಥಾನದಲ್ಲೊದಗುವ ಸಮಾಧಾನ, ಗಾಯತ್ರಿ ಟಿಫಿನ್ ರೂಮ್ನತ್ತ ಸುಳಿದಾಗ ಮೂಗಿಗೆ ಬಡಿಯುವ ಬೆಣ್ಣೆ ಮಸಾಲೆ ದೊಸೆಯ ಪರಿಮಳ, ನಮ್ಮ ಕಾಲೇಜಿನಲ್ಲಿ ನಡೆಯುತ್ತಿದ್ದ ಆಟಪಾಠಗಳು - ಇವಕ್ಕೆಲ್ಲ ಮನಸ್ಸು ಹಾತೊರೆಯುತ್ತದೆ..ಯಾವಾಗಲೂ ಇಲ್ಲದ್ದಕ್ಕೆ ಆಸೆ ಪಡುವುದು ಸಹಜವಲ್ಲವೇ..
ಜೆ.ಪಿ.ನಗರ,ಜಯನಗರ,ಕುವೆಂಪುನಗರ,ಲಕ್ಷ್ಮಿಪುರಮ್,ವಿಜಯನಗರ ಹೀಗೆ ಹೆಸರುಗಳೆಲ್ಲ ಬೆಂಗಳೂರಿನಲ್ಲಿದ್ದರೂ ಸಹ ಅಜಗಜಾಂತರ ವ್ಯತ್ಯಾಸ..ಬೆಂಗಳೂರನ್ನು ನಾ ತೆಗಳುತ್ತಿಲ್ಲ..ಎಷ್ಟಾದರೂ ನಮ್ಮೂರು ನನಗೆ ಹೆಚ್ಚೇ..ಇದು ಕೇವಲ ನನ್ನ ಅನುಭವ,ಅಭಿಪ್ರಾಯ..ಮತ್ತೇನೂ ಬರೆಯಲು ತೋಚುತ್ತಿಲ್ಲ..ನೆನಪುಗಳು ಕಾಡುತ್ತಿವೆಯಷ್ಟೇ..

Wednesday, June 10, 2009

ಮುಖಭಂಗ






















ಅಂದು ನಮ್ಮ ಬಳಗದ ಒಬ್ಬರ ಮನೆಯಲ್ಲಿ ಸತ್ಯನಾರಾಯಣ ಪೂಜೆ.ಹತ್ತಾರು ಜನರನ್ನು ಆಹ್ವಾನಿಸಿದ್ದರು.ನಾನೂ ಸಹ ಹೋಗಿದ್ದೆ..ಹೆಂಗಳೆಯರೆಲ್ಲ ಒಂದು ಬದಿ ಚಾಪೆಯ ಮೇಲೆ ಪೂಜೆಯನ್ನು ನೋಡುತ್ತ ಕುಳಿತಿದ್ದರು.

ಪುರೋಹಿತರು ಸಾಂಗವಾಗಿ ಪೂಜೆಯನ್ನು ನಡೆಸಿಕೊಡುತ್ತಿದ್ದರು.ದಂಪತಿಗಳು ಬಹಳ ಶ್ರದ್ಧಾಭಕ್ತಿಯಿಂದ ವ್ರತ ಮಾಡುತ್ತಿದ್ದರು.ಬೇಕಾದಷ್ಟು ತರಹ ಹಣ್ಣು ಹೂವುಗಳನ್ನು ದೇವರಿಗೆಂದು ತಂದಿರಿಸಿದ್ದರು.ಅದಕ್ಕೆಂದೇ ಮಂಟಪದೆದುರು ಒಂದು ಪ್ರತ್ಯೇಕ ಚಾಪೆಯನ್ನು ಹಾಸಿದ್ದರು.ನಾನು ಹಿಂದಿನ ಪಂಕ್ತಿಯಲ್ಲಿ ಕುಳಿತಿದ್ದೆ.ಪೂಜೆಯ ಮಧ್ಯೆ ಒಬ್ಬಳು ಚೆಂದದ ಹುಡುಗಿ ಎಲ್ಲರಿಗೂ ಬಣ್ಣ ಬಣ್ಣದ ಕಾಗದದಿಂದ ಅರಿಶಿನ ಪೊಟ್ಟಣಕ್ಕೆಂದು ಮಾಡಿದ ಹೂಗಳನ್ನು ಕುಂಕುಮ ಕೊಟ್ಟು ಹಂಚುತ್ತಿದ್ದಳು.

ಸ್ವಲ್ಪ ದೂರದಲ್ಲಿ ಆಟವಾಡಿಕೊಂಡು ಕುಳಿತಿದ್ದ ಸುಮಾರು
ಮೂರು ವರ್ಷದ ಮುದ್ದಾದ ಪುಟ್ಟ ಮಗುವಿನೆಡೆಗೆ ನನ್ನ ಗಮನ ಹರಿಯಿತು.ಕೇಳಿ ತೆಗೆದುಕೊಂಡ ಕಾಗದದ ಹೂವನ್ನು ಅತೀ ಜಾಗರೂಕತೆಯಿಂದ ಬಿಡಿಸಿ ಪೊಟ್ಟಣವನ್ನು ಬೇರೆ ಮಾಡುತ್ತಿತ್ತು.ಆಗ ಅದರ ಹಿಂದೆಯೇ ಕುಳಿತಿದ್ದ ಒಬ್ಬಳು ಮಧ್ಯವಯಸ್ಸಿನ ಹೆಂಗಸು ಮಗುವಿನ ಜುಟ್ಟನ್ನು ಮೆಲ್ಲನೆ ಎಳೆದರು. ತಿರುಗಿ ನೋಡಿದ ಮಗುವನ್ನು ಮಾತನಾಡಿಸಲನುವಾದರು. ಹೆಸರೇನೆಂದು ಕೇಳಿ ಶುರು ಮಾಡಿದ ಮಾತುಕತೆ ಮುಂದುವರೆಯುತ್ತಲೇ ಇತ್ತು.ಆ ಹೆಂಗಸಿಗೆ ಮಕ್ಕಳನ್ನು ಕಂಡರೆ ಬಹಳ ಇಷ್ಟವಿರುವಂತೆ ತೋರುತ್ತಿತ್ತು. ಮಗುವೂ ಮುದ್ದು ಮುದ್ದಾಗಿ ಅವರು ಕೇಳಿದ ಪ್ರಶ್ನೆಗಳಿಗೆಲ್ಲಾ ಉತ್ತರ ಕೊಡುತ್ತಿತ್ತು. A,B,C ಹೇಳಿಸಿದರು. ಅ,ಆ,ಇ,ಈ ಇವರು ಕೇಳಳಿಲ್ಲ..ಮಗುವೂ ಹೇಳಲಿಲ್ಲ..Rhymes ಹೇಳಿಸಿದರು..ಒಂದಾದಮೇಲೊಂದು ಬಿಡುವಿಲ್ಲದೆ ಆ ಚೂಟಿ ಮಗು ಹೇಳುತ್ತಲೇ ಇತ್ತು..ಆಗಾಗಲೇ ಸಾಕಷ್ಟು ಜನರ ಗಮನ ಇತ್ತ ಕಡೆ ಹರಿದಿತ್ತು..ಪುರೋಹಿತರು ಒಮ್ಮೆ "ಸದ್ದು!" ಎಂದು ಕೂಗಿದ್ದೂ ಆಯ್ತು..ಆದರೂ ಆ ಹೆಂಗಸು ಮತ್ತು ಮಗುವಿನ ಸಂಭಾಷಣೆ ಮುಗಿಯುವಂತೆ ಕಾಣಲಿಲ್ಲ..ಮಗು ಬೆಕ್ಕು,ಆನೆ,ಹುಲಿಗಳ ಹಾಗೆ ಸದ್ದು ಮಾಡಿ ತನ್ನ ಪ್ರತಿಭೆಯನ್ನು ತೋರಿಸಿತು..ನಂತರ "ನಾಯಿ ಹೇಗೆ ಬೊಗಳುತ್ತೆ ಚಿನ್ನ" ಎಂದು ಕೇಳಿದರು..ಮಗು ತನ್ನ ಸಣ್ಣ ಧ್ವನಿಯಲ್ಲಿ "ಬೌ" ಎಂದಿತು..ಆ ಹೆಂಗಸು "No dog in this world barks so softly" ಎಂದು ಹೇಳಿದರು..ಅದಕ್ಕೆ ಮಗು ಸ್ವಲ್ಪ ಜೋರಾಗಿ "ಬೌ ಬೌ" ಎಂದಿತು..ಆ ಹೆಂಗಸು ನಕ್ಕು,"ಇಷ್ಟೆನೆ..ನೋಡು..ಹೀಗೆ..ಬೌ ಬೌ ವೌ" ಎಂದು ಸ್ವಲ್ಪ ದೊಡ್ಡ ದನಿಯಲ್ಲಿ ಸದ್ದು ಮಾಡಿದರು..ಅವರನ್ನೆ ನೋಡುತ್ತಿದ್ದ ಚುರುಕು ಬುದ್ಧಿಯ ಮಗು ತನ್ನ ಬಲಗೈಯ ಕೈಬೆರಳುಗನೆಲ್ಲ ಮುದ್ದು ಮುದ್ದಾಗಿ ಜೋಡಿಸಿ ಮುಂದಕ್ಕೆ ಚಾಚಿ ಏನೋ ಕೊಡುವಂತೆ ನಟಿಸುತ್ತ "ತ್ಚು ತ್ಚು ತ್ಚು" ಎಂದು ಹೇಳಿತು!!!!!
ಆಹಾ..ಆ ಪುಟ್ಟ ಮಗುವಿನ ದನಿಯಲ್ಲಿ ಎಷ್ಟು ವ್ಯಂಗ್ಯ!ಒಂದು ನಿಮಿಷ ಇದು ನಿಜವಾಗಿಯು ಅಷ್ಟು ಚಿಕ್ಕ ಮಗುವೇ ಎನ್ನಿಸಿತು...ಅಲ್ಲಿದ್ದವರಲ್ಲಿ ಕೆಲವರಿಗೆ ನಗು ಬಂತು..ಆದರೂ ನಕ್ಕು ಅಪದ್ಧವಾಗುವುದು ಬೇಡವೆಂದು ಆ ಮಗುವನ್ನು ಮನಸ್ಸಿನಲ್ಲೇ ಹೊಗಳುತ್ತಿದ್ದರು..ಮತ್ತೆ ಕೆಲವರು ತೆಗಳುತ್ತಿದ್ದರೋ ಏನೋ..ಆ ಮಗುವಿನ ಬುದ್ಧಿ ಸ್ವಲ್ಪ ವಕ್ರವೆನಿಸಿದರೂ ಚುರುಕು ಎನ್ನುವುದಂತೂ ಒಪ್ಪುವ ವಿಷಯವೇ..ಅವರಿಬ್ಬರ ಸಂಭಾಷಣೆ ಆಲ್ಲಿಗೆ ಮುಗಿಯಿತು..ಅಷ್ಟರಲ್ಲಿ ಮಂಗಳಾರತಿಗೆಂದು ಜನ ಏಳುತ್ತಿದ್ದನ್ನು ನೋಡಿ ಸತ್ಯನಾರಾಯಣ ಪೂಜೆಯ ಪ್ರಸಾದವನ್ನು ನೆನೆಸಿಕೊಳ್ಳುತ್ತಿದ್ದೆ..ಇದ್ದಕ್ಕಿದ್ದಂತೆ ಹಸಿವು ಹೆಚ್ಚಾದಂತೆ ಭಾಸವಾಯಿತು..ಆ ಮಗುವಿನ ಹೆಸರು ನೆನಪಿಲ್ಲದಿದ್ದರೂ ಅದೇಕೋ ಈ ಸಣ್ಣ ಘಟನೆಯ ನೆನಪು ಮಾಸದೆ ಇನ್ನೂ ಉಳಿದಿದೆ..

Friday, June 5, 2009

ಈಜಾಟ ಕಲಿಸಿದ ಪಾಠ

ನನಗಿನ್ನೂ ಆಗ ೧೧ ವರ್ಷವಿರಬಹುದು. ಆ ವಯಸ್ಸಿಗೆ ತಕ್ಕಷ್ಟೂ ಎತ್ತರವಿರಲಿಲ್ಲ. ತೂಕವೂ ಸ್ವಲ್ಪ ಕಡಿಮೆಯೇ ಇತ್ತು. ಆಗ ಈಜಲು ಶುರು ಮಾಡಿದರೆ ಬಹಳ ಉಪಯೋಗವಾಗುತ್ತದೆ ಎಂದೆಣಿಸಿ ನನ್ನನ್ನು ಹತ್ತಿರದ ಈಜುಕೊಳದಲ್ಲಿ ಮಕ್ಕಳಿಗೆ ನಡೆಸುತ್ತಿದ್ದ ಸಮ್ಮರ್ ಕ್ಯಾಂಪ್ಗೆ ಸೇರಿಸಿದರು.

ಮೊದಲನೇ ದಿನ ನಾನು ಹುರುಪಿನಿಂದಲೇ ಹೋದೆ. ಎಷ್ಟೇ ಆದರೂ ಮಕ್ಕಳಿಗೆ ನೀರು ಇಷ್ಟವಲ್ಲವೇ..ಅಲ್ಲಿದ್ದವರೆಲ್ಲ ನನಗಿಂತ ಬೇಗ ಈಜು ಕಲಿಯುತ್ತಿದ್ದರು. ನಾನು ಮಾತ್ರ ಸ್ವಲ್ಪ ನಿಧಾನ. ಎಲ್ಲರಿಗಿಂತ ಒಂದೆರಡು ತಾಸು ಹಿಂದುಳಿದಿದ್ದೆ. ಮೊದಲು ಮುಳುಗಿ ೪ ಅಡಿ ಆಳ ನೀರಿನಲ್ಲಿ ಉಸಿರು ಹಿಡಿದು ಇರುವುದು, ಆಮೇಲೆ ಉಸಿರು ಹಿಡಿದು ಕೆಳಮುಖವಾಗಿ ತೇಲುವುದು, ಆಮೇಲೆ ಕಾಲುಗಳನ್ನು ಬಡಿಯುವುದು..ಹೀಗೆ ಕ್ರಮಬಧ್ಧವಾಗಿ ಹೇಳಿಕೊಡುತಿದ್ದರು. ಅಲ್ಲಿಯ ತನಕ ನಾನೂ ಎಲ್ಲರಂತೆಯೇ ಬೇಗ ಕಲಿತಿದ್ದೆ. ಆಮೇಲೆ ಫ್ಲೋಟ್ ಹಿಡಿದು ಕಾಲು ಬಡಿಯುತ್ತ ಮುಂದೆ ಹೋಗುವುದನ್ನು ಸುಲಭವಾಗಿ ಕಲಿತೆ.

ಆದರೆ ಕೈ ಬಡಿತವನ್ನು ಹೇಳಿಕೊಟ್ಟಾಗ ಮಾತ್ರ ನಾನು ಕಲಿಯಲು ಹೆಚ್ಚು ದಿನಗಳು ಒದ್ದಾಡಬೇಕಾಯ್ತು. ಕೈಗಳನ್ನು ಬಡಿದರೆ ಕಾಲು ಬಡಿಯಲಾಗುತ್ತಿರಲಿಲ್ಲ, ಕಾಲುಗಳನ್ನು ಬಡಿದರೆ ಕೈಗಳು ನಿಶ್ಕ್ರಿಯ. ಅದು ಹೇಗೆ ಎಲ್ಲರೂ ಎರಡನ್ನೂ ಒಟ್ಟಿಗೆ ಅಷ್ಟು ಸುಲಭವಾಗಿ ಕಲಿಯುತ್ತಿದ್ದರೋ. ನನಗೆ ಆಶ್ಚರ್ಯ,ಕೀಳರಿಮೆ ಎರಡೂ ಆಗುತ್ತಿತ್ತು. ನನ್ನಂತೆಯೇ ಇನ್ನಿಬ್ಬರು ಮಕ್ಕಳು ಆ ಹಂತವನ್ನು ದಾಟಲು ಕಷ್ಟಪಡುತ್ತಿದ್ದರು. ನಮಗೆ ಹೇಳಿಕೊಡುತ್ತಿದ್ದ coach ಎರಡು ದಿನ ನೋಡಿದರು. ನಾನೇನೂ ಹೆಚ್ಚು ಮುಂದುವರೆಯುವಂತೆ ಕಾಣಲಿಲ್ಲ. ನನ್ನನ್ನು ಕೊಳದಿಂದ ಹೊರಗೆ ಬರಹೇಳಿದರು. ನಾನು ಮೇಲೆ ಹತ್ತಿ ನೀರು ಕೆಳಗೆ ತೊಟ್ಟುತ್ತಿದ್ದುದನ್ನು ನೋಡುತ್ತ ನಿಂತೆ. ನಾನು ಮಾತ್ರ last ಅಂತ ನಾಚಿಕೆಯಾಗ್ತಿತ್ತು. ಕೊಳದ ಅಂಚಿನಲ್ಲಿ ನಿಂತಿದ್ದ ನನ್ನನ್ನು coach ತಮ್ಮ ಹಿಂದೆ ಬರಲು ಹೇಳಿದರು. ಅಂಚಿನಲ್ಲೇ ನಡೆಯುತ್ತ ಕೊಳದ ಮಧ್ಯಭಾಗಕ್ಕಿಂತ ಸ್ವಲ್ಪ ಮುಂದೆ ಹೋಗಿ ನಿಂತರು. ನಾನು ಅವರ ಪಕ್ಕ ನಿಂತೆ. "jump" ಎಂದರು. ಅವರಿಗೇನಾಗಿದೆ ಎಂದು ನಾನು ತಲೆಯೆತ್ತಿ ನೋಡಿದೆ. "ಕೇಳಿಸಲಿಲ್ವ..jump" ಎಂದರು. ನಾನು ಹಿಂದು ಮುಂದು ನೋಡಿದೆ. ಸುಮಾರು ೧೦ ಆಳ ಅಡಿ ಇತ್ತು ನಾವಿದ್ದ ಜಾಗದಲ್ಲಿ..ನನ್ನೆತ್ತರ ಆಗ ಕೇವಲ ೪ ಅಡಿ ೫ ಅಂಗುಲ. ನನಗಿಂದ ಬೇಗ ಕಲಿತ ಮಕ್ಕಳೂ ಕೂಡ ಇನ್ನೂ ಕಡಿಮೆ ಆಳದಲ್ಲಿ ಆಟವಾಡುತ್ತಿದ್ದರು. ನನಗೆ ಭಯವಾಯ್ತು..ಹಾಗೆ ಕಾಲಿನ ಹೆಬ್ಬೆರಳಿನಲ್ಲಿ ನೆಲ ಕೆರೆಯುತ್ತ ನಿಂತೆ. coachಗೆ ಸ್ವಲ್ಪ ಕೋಪ ಬಂತು. "ನೀನು ಈಗ ಧುಮುಕದಿದ್ದರೆ ನಾನು ನಿನ್ನನ್ನು ತಳ್ಳಿಬಿಡುತ್ತೇನೆ" ಎಂದರು. ನಾನು ಉಗುಳು ನುಂಗುತ್ತ ದೇವರನ್ನು ನೆನೆಸಿಕೊಂಡು ಧೈರ್ಯ ಮಾಡಿ ಧುಮುಕಿಯೇ ಬಿಟ್ಟೆ. ಮೊದಲು ತೇಲುತ್ತ ಬರಿ ಕಾಲುಗಳನ್ನು ಬಡಿಯುತ್ತಿದ್ದೆ. ೪ ಅಡಿ ಈಜುತ್ತಲೇ ಕೈಗಳನ್ನು ಬಡಿಯಲು ಶುರು ಮಾಡಿದೆ. ನಾನು ಈಜಿದೆ!!!
ನಂಬಲಾಗಲಿಲ್ಲ..ಅಂತು ಹಾಗೂ ಹೀಗೂ ಆ ಕಡೆ ದಡ ಸೇರಿಯೇ ಬಿಟ್ಟೆ. coach ನನ್ನತ್ತ ನೋಡಿ ಮುಗುಳ್ನಗುತ್ತಿದ್ದರು. ಏನೋ ದೊಡ್ಡ ಪೈಜ್ ಗೆದ್ದಷ್ಟು ಸಂತೋಶವಾಗುತ್ತಿತ್ತು. ಆದರೂ ನಾನು ಈಜು ಕಲಿಯಲು ನನ್ನಲ್ಲಿ ಜೀವಭಯ ಹುಟ್ಟಿಸಬೇಕಾಯ್ತೆ!! ಆದರೆ ನಮಗೆ ಕತ್ತು ತಿರುಗಿಸಿ ಉಸಿರೆಳೆಯುವುದನ್ನು ಇನ್ನೂ ಹೇಳಿಕೊಟ್ಟಿರಲಿಲ್ಲ. ಹಾಗಾಗಿ ಫುಲ್ ಲೆಂತ್ ಉಸಿರು ಹಿಡಿದು ಹೊಡೆಯಲು ಪ್ರಾಣ ಹೋಗುವಂತಾಗುತ್ತಿತ್ತು. breadthವೈಸ್ ಹೊಡೆಯಲು ನಮ್ಮೆಲ್ಲರಿಗೂ ಇಷ್ಟ.

ಮೊದಲ ಬಾರಿ full length ಹೊಡೆಯಲು ಹೇಳಿದಾಗ ನಾನು ಉಸಿರಿಗಾಗಿ ಮಧ್ಯ ಹೆಣಗಾಡಿ coach ಸಹಾಯ ತೆಗೆದುಕೊಳ್ಳಬೇಕಾಯ್ತು. ಸುಮ್ಮನೆ ಕಾಟ ಯಾಕೆ ಕೊಡ್ತಾರೋ ಇವರು ಎಂದು ನಾನು ಒಂದು ಉಪಾಯ ಹೂಡಿದೆ. ನನಗೆ ಅಷ್ಟುದ್ದ ಈಜಲಾಗುವುದಿಲ್ಲ..ಪಕ್ಕೆ ಹಿಡಿದುಕೊಳ್ಳುತ್ತದೆ ಎಂದು ಹೇಳಿದೆ. ಅದರಲ್ಲಿ ಅರ್ಧ ಸತ್ಯವಿತ್ತು..ನನಗೆ ತುಂಬ ಜೋರಾಗಿ ಓಡಿದಾಗ ಹಾಗಾಗುತ್ತಿತ್ತು. ಆದರೆ ಈ ಸಂದರ್ಭದಲ್ಲಿ ನನ್ನ ಅನುಕೂಲಕ್ಕೆ ಸುಳ್ಳು ಹೇಳಿದೆ. ಅವರು ಅಂದು ನಾನು ಬರಿ breadthwise ಹೊಡೆಯಲು ಹೇಳಿದರು. ಖುಶಿಯಾಗಿ ಆಟವಾಡಿಕೊಂಡು ಮನೆಗೆ ಹೋದೆ.

ಮಾರನೆಯ ದಿನ ಈಜು ಕೊಳಕ್ಕೆ ಇಳಿಯಲು ಸಿದ್ಧಳಾದೆ. ಅಷ್ಟರಲ್ಲಿ ನನ್ನ coach ಒಂದು ನಿಮಿಷ ತಡೆಯುವಂತೆ ಹೇಳಿದರು. ಹೋಗಿ ಅವರ ಬ್ಯಾಗ್ನಲ್ಲಿ ತಡಕಾಡಿ ಒಂದು ಸಣ್ಣ ಬಾಟ್ಲಿ ನೀರು ತಂದರು. "ಕುಡಿ.." ಎಂದು ಕೊಟ್ಟರು. ನನಗೆ ಬಾಯಾರಿಕೆಯಿಲ್ಲ ಎಂದು ಹೇಳಿ ಬೇಡವೆಂದೆ. ಅವರು ಮತ್ತೆ "ಸುಮ್ಮನೆ ಕುಡಿ" ಎಂದರು. ನಾನು ಮುಚ್ಚಳ ತೆಗೆದು ಕುಡಿದೆ. ಒಂದು ಗುಟುಕು ಗಂಟಲಲ್ಲಿನ್ನೂ ಇಳಿದಿರಲಿಲ್ಲ..ಮುಖ ಹಿಂಡುತ್ತ ಅಷ್ಟನ್ನು ಉಗಿದುಬಿಟ್ಟೆ..ಬರಿ ಉಪ್ಪುಪ್ಪು..ಉಪ್ಪು ನೀರು.."ಇದೇನು?" ಎಂಬಂತೆ ಅವರತ್ತ ನೋಡಿದೆ. "ದಿನ ಇನ್ಮೇಲೆ ಈಜುವುದಕ್ಕೆ ಮೊದಲು ನೀನು ಉಪ್ಪು ನೀರು ಕುಡಿಯಬೇಕು..ಆಗ ಈಜುವಾಗ ಪಕ್ಕೆ ಹಿಡಿದುಕೊಳ್ಳೂವುದಿಲ್ಲ.." ಎನ್ನಬೇಕೆ!!!

ಇನ್ನೆರಡು ವಾರ ನನ್ನ ಸಣ್ಣ ಸುಳ್ಳಿಗೆ full length ಹೊಡೆಯುವುದೂ ಅಲ್ಲದೇ ಉಪ್ಪು ನೀರಿನ ಆತಿಥ್ಯವನ್ನೂ ಮಾಡಿಸಿಕೊಳ್ಳಬೇಕಾಯ್ತು!

(ಪೂರ್ತಿ ಈಜು ಕೊನೆಗೂ ಕಲಿಯಲಿಲ್ಲ ಬಿಡಿ..ಸಮ್ಮರ್ ಕ್ಯಾಂಪ್ ಅಲ್ವೇ..ನಾನು ಕಲಿಯುವುದಕ್ಕೆ ಮುಂಚೆಯೇ ಮುಗಿದುಹೋಯ್ತು..ಆದರೆ ಈಜಿಗಿಂದ ಹೆಚ್ಚು ಮೌಲ್ಯದ ಪಾಠ ಕಲಿತೆ..)

Thursday, June 4, 2009

ಬಾಗಿಲ ಬಳಿ ಆಗಂತುಕನೇ?

ಇವರು ಆಫೀಸಿನಿಂದ ಮನೆಗೆ ಬರುವುದು ಸುಮಾರು ಎಂಟು ಘಂಟೆಗೆ. ನಾನು ಶುರುವಿನಲ್ಲಿ ಅಷ್ಟು ಹೊತ್ತಿಗೆ ಬಾಗಿಲು ಸದ್ದಾದ ಕೂಡಲೆ ಹೋಗಿ ಕದ ತೆರೆಯುತಿದ್ದೆ. ಇವರಿಗೆ ಬಹಳ ಸಿಟ್ಟು ಬರುತ್ತಿತ್ತು.ಯಾರೆಂದು ಸಹ ಕೇಳದೆ, ನೋಡದೆ ಅದು ಹೇಗೆ ಬಾಗಿಲು ತೆರೆದುಬಿಡುತ್ತೀಯೆ..ಅಷ್ಟೂ ತಿಳಿಯುವುದಿಲ್ಲವೇ ಎಂದು ಮೂದಲಿಸಿದರು. ಸರಿ..ನಾನು ಹೆಚ್ಚು ವಾದ ಮಾಡದೆ ಮಾರನೆಯ ದಿನ ಬೆಲ್ ಶಬ್ದವಾದ ಕ್ಷಣ ಇವರೇ ಎಂದು ತಿಳಿದಿದ್ದರೂ "ರೀ,ನೀವಾ?" ಎಂದು ಅಡುಗೆ ಮನೆಯಿಂದಲೇ ಕೂಗಿದೆ..ಉತ್ತರ ಬರಲಿಲ್ಲ. ತೂತು ಗಾಜಿನಲ್ಲಿ ನೋಡಿದರೆ ಇವರೇ ನಿಂತಿದ್ದರು..ಚಿಲಕ ತೆರೆದೆ..ಒಳಬಂದರು. ಏಕೆ ಉತ್ತರಿಸಲಿಲ್ಲವೆಂದು ಕೇಳಿದೆ. ಇವರು ಇದೇನು ನಮ್ಮ ರಾಜ್ಯವೇ,"ರೀ ನೀವಾ" ಎಂದು ಕೂಗಿದೆಯಲ್ಲ..ಜರ್ಮನ್ನರು ಕನ್ನಡವನ್ನು ಹೇಗೆ ಅರ್ಥ ಮಾಡ್ಕೋತಾರೆ. ಜರ್ಮನ್ನಲ್ಲಿ ಅಥವಾ ಆಗಲಿಲ್ಲ ಎಂದರೆ ಇಂಗ್ಲಿಷ್ನಲ್ಲಿ ಕೇಳು ಎಂದರು. ನಾನು ಮೊಂಡುವಾದ ಮಾಡಿದೆ. ಇನ್ಯಾರು ಬರುತ್ತಾರೆ..ಮತ್ತೆ ನಾ ಹೇಳೋದು ನಿಮಗೆ ಅರ್ಥವಾದರೆ ಸಾಕು ಎಂದೆಲ್ಲ ವಾದಿಸಿದೆ. ಇವರು ಜಗ್ಗಲಿಲ್ಲ. ಅದಾದ ಮೇಲೆ ನಾನು "wer ist das?" ಅಥವಾ "who is it?" ಎಂದು ಅರೆಮನಸ್ಸಿನಿಂದ ಇವರೇ ಎಂದು ಗೊತ್ತಿದ್ದರೂ ಕೇಳಿ ಉತ್ತರ ಬಂದಮೇಲೆ ಬಾಗಿಲು ತೆರೆಯುತ್ತಿದ್ದೆ.

ಒಂದು ರಾತ್ರಿ ಹೀಗೆ ಇವರನ್ನು ಇದಿರು ನೋಡುತ್ತ ಕಾಲವ್ಯಯ ಮಾಡೋಣವೆಂದು ಗಿಟಾರ್ ಹಿಡಿದು ಮೆಲ್ಲನೆಯ ಧ್ವನಿಯಲ್ಲಿ ಹಾಡುತ್ತ ಕುಳಿತೆ. ನುಡಿಸುವುದಕ್ಕೇನೂ ಹೆಚ್ಚು ಬರುವುದಿಲ್ಲ. ಹಾಡುವುದೆಂದರೆ ಬಹಳ ಇಷ್ಟವಾದ್ದರಿಂದ ಒಮ್ಮೊಮ್ಮೆ ಅದನ್ನು ಜೊತೆಗೆ ಬಳಸುತ್ತೇನೆ..ಏನೋ..duet ಹಾಡಿದ ಅನುಭವವಾಗುತ್ತದೆ..:) ಹೀಗೆ ಯಾವುದೋ ಸರಿಯಾಗಿ ಬರದಿರುವ ಹಾಡನ್ನು ಅಭ್ಯಾಸ ಮಾಡುತ್ತಿದಾಗ "ಟ್ರಿಣ್" ಸದ್ದಾದಂತಾಯಿತು. ಇವರೇ ಇರಬೇಕೆಂದು ನಮ್ಮ ಮುಂಚಿನ ವಾಗ್ವಾದವನ್ನು ಮರೆತು "ರೀ,ನೀವಾ?" ಎಂದೆ. ಉತ್ತರ ಇಲ್ಲ..ನೆನಪಾಯಿತು ಇವರು ಹೇಳಿದ್ದು..ಆದರೂ ಯಾಕೋ ಸ್ವಲ್ಪ ಹಟ ಸಾಧಿಸಬೇಕೆಂದು ಮನಸ್ಸಾಯಿತು. ಇನ್ನೊಮ್ಮೆ ಹಾಗೇ ಒಳಗಿನಿಂದ ಕೂಗಿದೆ. ಪ್ರತಿಕ್ರಿಯೆ ಬರಲಿಲ್ಲ. ಎಷ್ಟು ಕೊಬ್ಬು ಇವರಿಗೆ..ಎಲ್ಲ ಇವರು ಹೇಳಿದ ಹಾಗೆ ಆಗಬೇಕಾ ಎಂದು ಮನಸ್ಸಿನಲ್ಲಿ ನಿಂದಿಸಿ, "ರೀ, ನನಗೆ ಗೊತ್ತು ನೀವೆ ಅಂತ..ಬಾಗಿಲು ತೆಗೀಬೇಕೋ ಬೇಡ್ವೋ ಹೇಳಿ..ಅಷ್ಟು ಮಾತಾಡಬಾರ್ದು ಅಂತಿದ್ರೆ ಅಲ್ಲೇ ಇರಿ..ನಾನು ಬೇರೆ ಭಾಷೆಯಲ್ಲಿ ಮಾತಾಡೋದಿಲ್ಲ..ಒಂದು ದಿನ adjust ಮಾಡ್ಕೊಳಿ" ಎಂದು ಕೂಗಿದೆ. ಆಗಲೂ ನಿಶ್ಯಬ್ದ..ಸ್ವಲ್ಪ ಅನುಮಾನವಾಯ್ತು..ಬಾಗಿಲ ಬಳಿ ಹೋಗಿ ತುದಿಗಾಲಿನಲ್ಲಿ ನಿಂತು ತೂತುಗಾಜಿನಲ್ಲಿ ಇಣುಕಿದೆ. ಯಾರೂ ಇರಲಿಲ್ಲ. ಸ್ವಲ್ಪ ಭಯವಾಯ್ತು. ಆದರೂ ಇವರೇ ನನಗೆ ಬುದ್ಧಿ ಕಲಿಸುವುದಕ್ಕೆ ಹೀಗೆ ಮಾಡುತ್ತಿದ್ದಾರೆ. ಅಲ್ಲೆ ಪಕ್ಕದಲ್ಲಿ ಅವಿತುಕೊಂಡಿರಬೇಕು ಎಂದುಕೊಂಡೆ. ಹಾಗು ಬಾಗಿಲು ತೆರೆದು ನೋಡಲು ಭಯವಾಯ್ತು. ಗೊತ್ತಿಲ್ಲದ ದೇಶ,ಭಾಷೆ,ಜನ..ಹೇಗೆ ನಂಬುವುದು..ಇವರೇಕೆ ಇವತ್ತು ಹೀಗೆ ಮಾಡುತ್ತಿದ್ದಾರೆ ಎಂದುಕೊಂಡು,"ರೀ,ಇನ್ನೆರಡು ನಿಮಿಷ ಕೊಡ್ತೀನಿ..ಅಷ್ಟರೊಳಗೆ ಮಾತನಾಡಿದರೆ ಸರಿ..ಇಲ್ಲವಾದರೆ ನನಗೆ ತುಂಬ ಕೋಪ ಬರತ್ತೆ" ಎಂದು ಬಾಗಿಲ ಹತ್ತಿರ ಬಡಾಯಿಸಿ ಬೇಕೆಂದೆ ಇವರಿಗೆ ಕಿರುಕುಳ ಕೊಡಬೇಕೆಂದು ಇಂಗ್ಲಿಷ್ ಹಾಡನ್ನು ಗಿಟಾರ್ ಜೊತೆ ಹಾಡತೊಡಗಿದೆ. ಒಂದು ನಿಮಿಷವಾಯ್ತು..ಸದ್ದೇ ಇಲ್ಲ. ಗಿಟಾರ್ ಅನ್ನು ಪಕ್ಕಕ್ಕಿರಿಸಿ ಇವರ ಅಚ್ಚುಮೆಚ್ಚಿನ "ಜೊತೆಯಲಿ..ಜೊತೆ ಜೊತೆಯಲಿ" ಒಂದೆರಡು ಸಾಲು ಹಾಡಿದೆ. ಆಗಲೂ ಪ್ರತಿಕ್ರಿಯೆ ಇಲ್ಲದಾಗ ಇವರಲ್ಲವೇನೋ, ಬೇರೆ ಯಾರೋ ಬಂದು ಹಿಂದಿರುಗಿರುತ್ತಾರೆಂದುಕೊಂಡು ಯೋಚಿಸುತ್ತಿರಬೇಕಾರೆ ಬಾಗಿಲ ಕರೆಗಂಟೆ ಸದ್ದಾಯಿತು. ಎನೂ ಗೋಜೇ ಬೇಡ ಎಂದು "ವೆರ್ ಇಸ್ತ್ ದಾಸ್" ಎಂದೆ.."ನಾನೆ ಕಣೆ" ಎಂದರು..ಬಾಗಿಲು ತೆರೆದು ಇವರನ್ನು ದಿಟ್ಟಿಸಿ ನೋಡಿದೆ. ಇವರು ಪ್ರಶ್ನಾರ್ಥಕವಾಗಿ ನನ್ನತ್ತ ನೋಡಿದರು. ಆಹಾ..ಎಷ್ಟು ಚೆನ್ನಾಗಿ ನಾಟಕವಾಡ್ತಾರೆ ಎಂದುಕೊಂಡು "ನನಗೆ ಗೊತ್ತು ನೀವೆ ಅಂತ" ಎಂದು ಹೇಳಿದೆ. "ಏನು ನಾನೇ?" ಎಂದು ಕೇಳಿದರು. ಹುಸಿಗೋಪದಿಂದ ಇನ್ನೊಮ್ಮೆ ಹಾಗೆ ಮಾಡಬಾರದೆಂದೆ. ಅವರಿಗೆ ಎನೂ ಅರ್ಥವೇ ಆಗಲಿಲ್ಲ. ಆಮೇಲೆ ಎಲ್ಲವನ್ನೂ ವಿವರಿಸಿ ಹೇಳಿದ ಮೇಲೆ ಇವರು ನಾನು ಮಾಡಿದ್ದು ಸರಿಯಾಯ್ತೆಂದು ಹೇಳಿದರು. ಯಾರೋ ಏನೋ..ಅಷ್ಟು ಅಗತ್ಯವಿದ್ದವರು ಕೆಳಗಡೆ ಮೇನ್ ಡೋರಿನತ್ತ ಕಾಲ್ ಮಾಡಿ ಬರುತ್ತಿದ್ದರೆಂದರು. ಸ್ವಲ್ಪ ಹೊತ್ತು ನಾವಿಬ್ಬರು ಯಾರೋ ನಮ್ಮ ಫ್ಲೋರಿನವರೆ ಯಾಕೆ ಬಂದಿರಬಾರದು ಎಂದು ಯೋಚಿಸಿದೆವು..ಏನೋ ತಿಳಿಯದೆ ಆ ವಿಷಯವನ್ನು ಪಕ್ಕಕ್ಕಿರಿಸಿದೆವು. ಇವರು ಮಾತ್ರ "ಅದಕ್ಕೆ ನಾನು ಹೇಳೋದು..ಈ ಜನರಿಗೆ ಅರ್ಥವಾಗುವ ಹಾಗೆ ಮಾತನಾಡು ಅಂತ" ಎಂದು ತಮ್ಮನ್ನು ತಾವೇ ಅನುಮೋದಿಸಿಕೊಂಡರು..ಇಂತಹ ಸದವಕಾಶ ಸಿಕ್ಕಿದರೆ ಬಿಡುತ್ತಾರೆಯೆ ಮತ್ತೆ!! ಆಮೇಲೆ ಇಬ್ಬರೂ ಊಟ ಮಾಡಿ ಸ್ವಲ್ಪ ಹೊತ್ತು ಟಿವಿ ನೋಡಿ ಮಲಗಿದೆವು. ನಿದ್ದೆ ಹತ್ತಲಿಲ್ಲ ನನಗೆ. ಸುಮಾರು ಹನ್ನೆರಡಕ್ಕೆ ಒಂದು ಮೂರು ಸಲವಾದರೂ ನಡೆದ ಘಟನೆ ಮನಸ್ಸಿನಲ್ಲಿ ಅನಾವರಿಸಿಕೊಂಡಿತ್ತು. ಹಠಾತ್ತನೆ ಆ ಸದ್ದು ನನ್ನ ತಲೆಯಲ್ಲಿ ಪ್ರತಿಧ್ವನಿಸಿತು.."ಠಿಣ್" ಮತ್ತೊಮ್ಮೆ "ಠಿಣ್"..ಅದು ಖಂಡಿತವಾಗಿಯು "ಟ್ರಿಣ್" ಆಗಿರಲಿಲ್ಲ..ಅದು ಖರೇ "ಠಿಣ್" ಆಗಿತ್ತು. ನಗೆ ತಡೆಯಲಾಗಲಿಲ್ಲ. ಅಷ್ಟು ರಾತ್ರಿಯಲ್ಲಿ ಹೇಗೆ ನಗಲಿ. ನನ್ನ ಪೆದ್ದುತನಕ್ಕೆ ನಕ್ಕು ಇವರನ್ನು ಎಬ್ಬಿಸುವುದು ದಂಡ. ನೆಮ್ಮದಿಯಾಗಿ ಮಲಗಿದ್ದರು. ಆ microwave ovenನಿಂದ ಬಂದ ಸದ್ದನ್ನು ಗಿಟಾರ್ ರಂಪದಲ್ಲಿ ಬಾಗಿಲ ಕರೆಗಂಟೆಯೆಂದಾದ ತಪ್ಪುಕಲ್ಪನೆಯಿಂದ ಎಷ್ಟು ಅನರ್ಥವಾಯ್ತು ಎಂದು ಯೊಚಿಸುತ್ತಿದಾಗ ನನಗೆ ನಗು ತಡೆಯುವುದು ಬಹಳ ಕಷ್ಟವಾಯ್ತು. "ಜೊತೆಯಲಿ.." ಹಾಡಿದ್ದು ಪುಟ್ಟ ಬಾಗಿಲನ್ನು ಬಡಿದ ಒಂದು ಬಟ್ಟಲು ಅನ್ನವನ್ನು ಕುರಿತು ಎಂದು ನೆನೆಸಿಕೊಂಡಾಗ ನನ್ನ ಮೂರ್ಖತನಕ್ಕೆ ನನ್ನನ್ನೆ ಹಳಿದುಕೊಳ್ಳಬೇಕಾಯ್ತು. ಇವರನ್ನು ನೋಡುತ್ತ ಮೆಲ್ಲನೆ "ತಪ್ಪಾಯ್ತು ಕ್ಷಮಿಸಿ" ಎಂದುಸುರಿದೆ. ಇವರಿಗೆ ಕೇಳಿಸದಿದ್ದರೂ ನನಗೆ ಸಮಾಧಾನವಾಗಿ ಬೇಗ ನಿದ್ರೆ ಹೋದೆ..

Wednesday, June 3, 2009

ಭಾಷಾಭಿಮಾನ

ನಾವಿರುವುದು ಜರ್ಮನಿಯ ಫ್ರೈಬುರ್ಗ್ ಎಂಬ ಒಂದು ಸಣ್ಣ ಊರಿನಲ್ಲಿ.ನಾನು ಇಲ್ಲಿ ಬಂದು ಮೂರು ತಿಂಗಳಾಗಿವೆ ಅಷ್ಟೆ.ನಾನು ಇಲ್ಲಿ ಬಂದ ಹೊಸತರಲ್ಲಿ ಇವರ(ನಮ್ಮ ಯಜಮಾನರ) ಅತಿಯಾದ ಕನ್ನಡ ಭಾಷಾಭಿಮಾನವನ್ನು ನೋಡಿ ನನಗೆ ಆಶ್ಚರ್ಯವಾಗುತ್ತಿತ್ತು.ಕನ್ನಡದ ಬಗ್ಗೆ ಅಭಿಮಾನವಿದ್ದರೂ ಆಂಗ್ಲಮಾಧ್ಯಮದ ಹಲವಾರು ಪದಗಳು,ವಾಕ್ಯಗಳನ್ನು ಬಳಸುವುದು ರೂಢಿಯಾಗಿ ಹೋಗಿದೆ ನನಗೆ.ಚೆನ್ನಾಗಿ ಇಂಗ್ಲಿಷ್ ಮಾತನಾಡಬಲ್ಲೆ ಎಂದು ಸ್ವಲ್ಪ ಒಣಜಂಭ ಇದ್ದೆ ಇತ್ತು.ಇವರು ಅದಕ್ಕೆ ಒಂದಿನಿತೂ ಪ್ರೋತ್ಸಾಹ ಕೊಡಲಿಲ್ಲ.ಅದಿರಲಿ,ತೀವ್ರವಾಗಿ ವಿರೋಧಿಸುತ್ತಿದ್ದರು.ನನಗೂ ಮೊದಮೊದಲು ಕೋಪ ಬರುತ್ತಿತ್ತು.ಆದರೆ ಇತ್ತೀಚೆಗೆ ಇವರು ಹೇಳುವುದು ಸರಿ ಎಂದು ನಿಧಾನವಾಗಿ ಅರ್ಥವಾಗುತ್ತಿದೆ..ಈ ದೇಶದ ಜನರನ್ನು ನೋಡಿದ ಮೇಲೆ.ಕ್ರೆಡಿಟ್ ಕಾರ್ಡ್ ಪ್ರಕಟಣೆಗೆಂದು ದೂರವಾಣಿ ಕರೆ ನೀಡಿದವರೂ ಸಹ ನಾನು ಜರ್ಮನ್ ಬಿಟ್ಟು ಇಂಗ್ಲಿಷ್ನಲ್ಲಿ ಪ್ರತಿಕ್ರಿಯೆ ನೀಡಿದುದಕ್ಕೆ ಫೋನನ್ನು ಕುಕ್ಕಿಬಿಡುವುದೆ! ನಮ್ಮ ಬೆಂಗಳೂರು ನೋಡಿ..ಹೇಗಾಗಿ ಹೋಗಿದೆ..ಬಸ್ಸಿನ ಒಂದು ಗುಂಪಿನಲ್ಲಿ ನಿಂತರೆ ಕಡಿಮೆ ಎಂದರೂ ಐದಾರು ಭಾಷೆ ಕೇಳಬಹುದು.ಮಧ್ಯೆ ಎಲ್ಲಾದರೊಮ್ಮೆ ಕನ್ನಡ ಕೇಳಿಸಿದರೆ ಪುಣ್ಯ.ಯಾರು ಯಾವುದೇ ಭಾಷೆಯನ್ನು ಮಾತನಾಡಿದರೂ ನಮ್ಮ ಬೆಂಗಳೂರಿನ ಹಳೇ ಕನ್ನಡಿಗರು ಸಹಕರಿಸಿಬಿಡುತ್ತಾರೆ.ಹೀಗೇಕೆ?ನಮ್ಮ ಕನ್ನಡದ ಮೌಲ್ಯ ತಿಳಿಯಬೇಕಾದರೆ,ಅದರ ಸುಗಂಧ ಸವಿಯಬೇಕಾದರೆ ನಾನು ಇಷ್ಟು ದೂರ ಬರಬೇಕಾಯ್ತೆ?ನಾನು ಹಲವಾರು ಬೆಂಗಳೂರಿನವರಂತೆ ಹಿಂದಿ,ತಮಿಳು,ಇಂಗ್ಲಿಷ್,ಕೊನೆಗೆ ಮಲಯಾಳಮ್ ಸಹ ನನ್ನ ಕಚೇರಿಯ ಜನರೊಡನೆ ಸಂಪರ್ಕವಿದ್ದಾಗ ಚೂರು ಪಾರು ಮಾತನಾಡುತ್ತಿದೆ..ಅದೇಕೆ ಹಾಗೆ ಮಾಡಿದೆನೋ ನಾ ಅರಿಯೆ.ಇಲ್ಲಿ ಬಂದು ಪರಿತಪಿಸಿದರೆ ಏನು ಪ್ರಯೋಜನ!ಒಂದಿಬ್ಬರಿಗೆ ಕನ್ನಡ ಕಲಿಸುವ ಅವಕಾಶವನ್ನೂ ಕಳೆದುಕೊಂಡು ಬಿಟ್ಟೆ.ಮತ್ತೆ ಇಲ್ಲಿ ಬಂದು ಜರ್ಮನ್ ಕಲಿಯಬೆಕಾಗಿದೆ..ಎಂಥ ವಿಪರ್ಯಾಸ..
ಪೂರ್ಣ ಚಂದ್ರ ತೇಜಸ್ವಿಯವರ "ಜುಗಾರಿ ಕ್ರಾಸ್",ಕೇಶವರಾವ್ ಅವರ "ಬೀಚಿ: ಬುಲ್ಲೆಟ್ಸು,ಬಾಂಬ್ಸು,ಭಗವದ್ಗೀತೆ",
ಗಳಗನಾಥರ ಸಣ್ಣ ಕಥೆ ಓದಿ ಕನ್ನಡ ಪ್ರೇಮ ಹೆಚ್ಚಾಗಿದೆಯೋ,ಈ ದೇಶದ ಜನರನ್ನು ನೋಡಿ ಹೆಚ್ಚಾಗಿದೆಯೋ,ಅಥವಾ ಇವರು ಪದೇ ಪದೇ ನನ್ನ ಇಂಗ್ಲಿಶ್ ಆಕ್ಸೆಂಟ್ ಅನ್ನು ಅಣಕಿಸಿ ಕುಚೋದ್ಯ ಮಾಡುವುದಕ್ಕಾಗಿ ಬುದ್ಧಿ ಬಂದಿದೆಯೋ ತಿಳಿಯದು..ಆದರೆ ಈ ಅನುಭವ ಮಾತ್ರ ಅಧ್ಭುತವಾಗಿದೆ..ಇದ್ದಕ್ಕಿದ್ದ ಹಾಗೆ ನಮ್ಮ ಭಾಷೆಯ ಬಗ್ಗೆ ಹೊಸ ಪ್ರೇಮ,ಗೌರವ ಮೂಡಿದೆ..ನಾನು ಇವರನ್ನು ಮದುವೆಯಾದ ಮೇಲೆ ಹೊಸ ಪ್ರೀತಿ ಮೂಡಿದ ಅನುಭವಕ್ಕೆ ಹೋಲಿಸಬಹುದೇನೋ..ನಮ್ಮ ಭಾಷೆಯ ಸೌಂದರ್ಯಕ್ಕೆ ಮರುಳಾಗಿ ಹೋಗಿದ್ದೇನೆ..ನಾವಿಬ್ಬರೂ ಜೊತೆ ಜೊತೆಯಲ್ಲಿ ಜೀವನ ಕಳೆಯುತ್ತ ಮುದುಕರಾಗಿ ನಮ್ಮ ಸೌಂದರ್ಯ ಬತ್ತಿ ಹೋಗುತ್ತದೆ..ಎಲ್ಲ ಜೀವಿಗಳೂ ಅಷ್ಟೆ..ಆದರೆ ವರ್ಷಗಳು ಕಳೆದಹಾಗೆ ಕನ್ನಡ ಇನ್ನೂ ಹೊಚ್ಚ ಹೊಸದಾಗಿ,ಹೆಚ್ಚು ಸುಂದರವಾಗಿ ಕಂಗೊಳಿಸುತ್ತದೆ..ಕನ್ನಡಿಗಿಂತಲೂ ಕನ್ನಡ ಸುಂದರ..ಅದನ್ನು ಪ್ರೀತಿಸಲು ಮಾತ್ರ ಕೇಳಿಕೊಂಡು ಬಂದಿರಬೇಕು..ನನ್ನಂಥಹ ಹಲವರು ಈಗಾಗಲೆ ಬಹಳ ಕಾಲ ಇದರ ಕಂಪನ್ನು ಸವಿಯದೆ,ಹರಡದೆ ಸಮಯ ವ್ಯಯ ಮಾಡಿದವರಿಗೆ ಈ ನನ್ನ ಅಂಕಣ ಒಂದು ಕಿವಿಮಾತು.

-ಒಬ್ಬಳು ಕನ್ನಡ ಪ್ರೇಮಿ